ಜಿಲ್ಲೆ

ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಿ

ಸಿದ್ದಾಪುರ: ಮಳೆಗಾಲದ ಪೂರ್ವದಲ್ಲಿ ಆಗಬೇಕಾದ ಎಲ್ಲ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸಬೇಕು. ಹವಾಮಾನ ಇಲಾಖೆಯ ಮಾಹಿತಿಯಂತೆ ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಇಲಾಖೆ ಅಧಿಕಾರಿಗಳು ಜಾಗೃತರಾಗಿರಬೇಕು ಎಂದು ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಸೂಚನೆ ನೀಡಿದರು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ಮಳೆಗಾಲದ ಪೂರ್ವ ತಯಾರಿ ಕುರಿತು ಬುಧವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ವರ್ಷ ಮಳೆಯಿಂದ ನೆರೆ ಹಾನಿ ಹಾಗೂ ಮನೆಗಳ ಕುಸಿತ ಹೆಚ್ಚಿನ ಪ್ರಮಾಣದಲ್ಲಿ ಆಗಿದೆ. ಮುಂಜಾಗ್ರತೆಯಾಗಿ ಯಾವ ಮನೆಯಲ್ಲಿ ವಾಸ್ತವ್ಯ ಮಾಡಲು ಆಗುವುದಿಲ್ಲವೊ ಅಂಥ ಮನೆಯವರು ಬೇರೆಡೆ ಉಳಿಯುವುದಕ್ಕೆ ಗ್ರಾಪಂ ಮಟ್ಟದಲ್ಲಿ ಪಿಡಿಒ ಹಾಗೂ ಪಪಂ ವ್ಯಾಪ್ತಿಯಲ್ಲಿ ಮುಖ್ಯಾಧಿಕಾರಿಗಳು ವ್ಯವಸ್ಥೆ ಮಾಡಬೇಕು ಎಂದರು.

ಸಂಚಾರಕ್ಕೆ ತೊಂದರೆ ಆಗದಂತೆ ಲೋಕೋಪಯೋಗಿ ಹಾಗೂ ಜಿಪಂ ಇಲಾಖೆ ವ್ಯಾಪ್ತಿಯ ರಸ್ತೆಗಳಲ್ಲಿನ ಹೊಂಡ ಮುಚ್ಚಬೇಕು ಹಾಗೂ ಚರಂಡಿಗಳಲ್ಲಿನ ಹೂಳು ತೆಗೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ದೇವರಾಜ ಮಾತನಾಡಿ, ಬಿತ್ತನೆ ಬೀಜ ಈಗ ಸಾಕಷ್ಟು ಪ್ರಮಾಣದಲ್ಲಿ ಬಂದಿಲ್ಲ. ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಗೊಬ್ಬರಗಳ ತೊಂದರೆ ಇಲ್ಲ. ಯಾವುದೇ ವಿಶೇಷ ಅನುದಾನ ಬಂದಿಲ್ಲ ಎಂದರು.

ಹೆಸ್ಕಾಂ ಅಧಿಕಾರಿ ಡಿ.ಟಿ. ಹೆಗಡೆ ಮಾತನಾಡಿ, ಈಗಾಗಲೇ ಲೈನ್ ಕಟಿಂಗ್ ಕಾಮಗಾರಿ ನಡೆಯುತ್ತಿದೆ. ಮಳೆಗಾಲದಲ್ಲಿ ಮರಗಳು ಬೀಳುವುದು ಹೆಚ್ಚಾಗಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಸಹಕರಿಸಬೇಕು ಎಂದರು.

ಪಶುಸಂಗೋಪನೆ, ಅರಣ್ಯ, ಪಟ್ಟಣ ಪಂಚಾಯಿತಿ, ಶಿಕ್ಷಣ, ತೋಟಗಾರಿಕೆ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಸಮಾಜಕಲ್ಯಾಣ, ಆರೋಗ್ಯ, ಅಗ್ನಿಶಾಮಕ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು. ತಾಪಂ ಇಒ ಪ್ರಶಾಂತ ರಾವ್ ಇದ್ದರು.