ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಕೈಗೊಂಡಿರುವ ಇಂದಿರಾ ಗಾಜಿನಮನೆ ಉದ್ಯಾನ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ಎದುರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ಬೆಳಗ್ಗೆ ಇಂದಿರಾ ಗಾಜಿನ ಮನೆ ಉದ್ಯಾನಕ್ಕೆ ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿದ್ದ ವಾಯು ವಿಹಾರಿಗಳು ಒಂದೊಂದಾಗಿ ಸಮಸ್ಯೆಗಳನ್ನು ಹೇಳಿಕೊಂಡರು.
‘1 ವರ್ಷದಿಂದ ಇಲ್ಲಿ ಕಾಮಗಾರಿ ನಡೆಯುತ್ತಿದೆ. 17.5 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ನಾಲ್ಕೈದು ಕೆಲಸಗಾರರು ನಿರ್ವಹಿಸುತ್ತಿದ್ದಾರೆ. ಎಲ್ಲೆಂದರಲ್ಲಿ ನಿರ್ಮಾಣ ಸಾಮಗ್ರಿ, ತ್ಯಾಜ್ಯಗಳನ್ನು ಎಸೆಯಲಾಗಿದೆ. ಇದರಿಂದ ಬೆಳಗ್ಗೆ ವಾಕಿಂಗ್ ಮಾಡಲು ಅನನುಕೂಲವಾಗಿದೆ. ಉದ್ಯಾನದ ಆವರಣದಲ್ಲಿ ವಿದ್ಯುತ್ ದೀಪ ಅಳವಡಿಸಲು ನಾಲ್ಕು ಅಂತಸ್ತಿನ ಮನೆ ನಿರ್ವಣಕ್ಕೆ ಬೇಕಾಗುವ ಪಿಲ್ಲರ್ನಂತೆ ಫೌಂಡೇಷನ್ ಹಾಕಿ ದುಂದುವೆಚ್ಚ ಮಾಡಲಾಗಿದೆ’ ಎಂದು ವಾಯು ವಿಹಾರಿಗಳು ದೂರಿದರು.
ಚೆನ್ನಾಗಿದ್ದ ಪೇವರ್ಸ್ ಕಿತ್ತು ಕಳಪೆ ಕಾಮಗಾರಿ ಮಾಡಲಾಗಿದೆ. ವಿಶ್ರಾಂತಿಗಾಗಿ 6.5-7 ಅಡಿ ಎತ್ತರಕ್ಕೆ ಜರ್ಮನ್ ಟೆಂಟ್ ಗೋಪುರ ನಿರ್ವಿುಸಲಾಗಿದೆ. ಚೂಪಾದ ವಸ್ತುಗಳಿಂದ ಯಾರು ಬೇಕಾದರೂ ಜರ್ಮನ್ ಟೆಂಟ್ಅನ್ನು ಹರಿದು ಹಾಕಬಹುದು. ಅಂದಾಜು 1 ಕೋಟಿ ರೂ. ಖರ್ಚು ಮಾಡಿದರೂ ಸುಧಾರಣೆ ಮಾಡಬಹುದಿತ್ತು. ಅದು ಬಿಟ್ಟು 17.5 ಕೋಟಿ ರೂ. ಖರ್ಚು ಮಾಡುತ್ತಿರುವುದು ದುಂದುವೆಚ್ಚ ಎಂದು ಆರೋಪಿಸಿದರು.
ವಾಯುವಿಹಾರಿಗಳೊಂದಿಗೆ ರ್ಚಚಿಸಿ: ಇಂದಿರಾ ಗಾಜಿನಮನೆಯ ವಾಯುವಿಹಾರಿಗಳ ಸಂಘದೊಂದಿಗೆ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್ಸಿಟಿ ಅಧಿಕಾರಿಗಳು ನಿಯಮಿತವಾಗಿ ಸಭೆ ನಡೆಸಿ ಸಾರ್ವಜನಿಕರ ಅಗತ್ಯಕ್ಕೆ ತಕ್ಕಂತೆ ಕಾಮಗಾರಿ ಕೈಗೊಳ್ಳುವಂತೆ ಸಚಿವ ಬಸವರಾಜ ಸೂಚಿಸಿದರು. ಕೂಡಲೆ ಮೂಲ ಸೌಕರ್ಯಗಳಾದ ಶೌಚಗೃಹ, ದೀಪದ ವ್ಯವಸ್ಥೆಯನ್ನು ಉದ್ಯಾನದಲ್ಲಿ ಕಲ್ಪಿಸಲಾಗುವುದು ಎಂದರು. ಪೇವರ್ಸ್ ಕಾಮಗಾರಿ ಸರಿಪಡಿಸುವಂತೆ ಇಂಜಿನಿಯರ್ ಒಬ್ಬರನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಬೀದಿ ಬದಿ ಮೀನು ಮಾರಾಟ ಇಲ್ಲ: ಗಣೇಶಪೇಟೆಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ಮೀನು ಮಾರುಕಟ್ಟೆ ನಿರ್ವಿುಸಲಾಗುತ್ತಿದೆ. ಬಳಿಕ ಯಾರೂ ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡಬಾರದು. ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಬೇಕು ಎಂದು ಸಚಿವರು ಮೀನು ಮಾರಾಟಗಾರರಿಗೆ ಮನವಿ ಮಾಡಿದರು.
ಇಲ್ಲಿಯೇ ಚಿಕ್ಕದಾದ ಸ್ಥಳದಲ್ಲಿ ಮೀನು ಮಾರಾಟಕ್ಕೆ ಬಹುಮಹಡಿ ಕಟ್ಟಡ ನಿರ್ವಿುಸುವ ಅಗತ್ಯವಿರಲಿಲ್ಲ. ಅಲ್ಲಿ ವ್ಯಾಪಾರವಾಗುವುದಿಲ್ಲವೆಂದು ಮೀನು ಮಾರಾಟಗಾರರು ಕೆಲ ದಿನಗಳಲ್ಲಿಯೇ ಮತ್ತೆ ರಸ್ತೆ ಮೇಲೆ ಬಂದು ವ್ಯಾಪಾರ ಮಾಡುವುದು ನಿಶ್ಚಿತ. ಬೇರೆಡೆ ಸರ್ಕಾರಿ ಜಾಗ ಪಡೆದು ಮೀನು ಮಾರುಕಟ್ಟೆ ನಿರ್ವಿುಸಿದ್ದರೆ ಸರಿಯಾಗುತ್ತಿತ್ತು ಎಂದು ಸ್ಥಳೀಯರೊಬ್ಬರು ಸಚಿವರಿಗೆ ಸಲಹೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆಯ 7.5 ಕೋ. ರೂ. ವೆಚ್ಚದಲ್ಲಿ ನ್ಯೂ ಕಾಟನ್ ಮಾರ್ಕೆಟ್ನಲ್ಲಿ ನಿರ್ಮಾಣ ಹಂತದಲ್ಲಿರುವ ಇಂಟೆಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್, ಗೋಕುಲ ರಸ್ತೆ ಕೈಗಾರಿಕಾ ವಸಾಹತು ಪ್ರದೇಶದಲ್ಲಿ 18.5 ಕೋ. ರೂ.ವೆಚ್ಚದಲ್ಲಿ ಮುಖ್ಯರಸ್ತೆ, 8.5 ಕೋ. ರೂ. ವೆಚ್ಚದ ಉಪ ರಸ್ತೆ ಕಾಮಗಾರಿಗಳನ್ನು ಸಚಿವರು ವೀಕ್ಷಿಸಿದರು. ಚಿಟಗುಪ್ಪಿ ಆಸ್ಪತ್ರೆ, ತೋಳನಕೆರೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಸ್ಮಾರ್ಟ್ಸಿಟಿ ಎಂ.ಡಿ. ಶಕೀಲ್ ಅಹ್ಮದ್, ಅಧಿಕಾರಿಗಳಾದ ಎಂ. ನಾರಾಯಣ, ಎಸ್.ಎಚ್. ನರೇಗಲ್, ಇತರರು ಇದ್ದರು.
ಉದ್ಘಾಟನೆ ಅಕ್ಟೋಬರ್ 5ರಂದು
ಹುಬ್ಬಳ್ಳಿ: ಹು-ಧಾ ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆ ಅನುದಾನದಲ್ಲಿ ಕೈಗೊಂಡಿರುವ ಕೆಲ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಅಕ್ಟೋಬರ್ 5ರಂದು ಉದ್ಘಾಟಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ವಿಳಂಬವಾಗಿರುವುದು ನಿಜ. ಕರೊನಾ ಹಾಗೂ ಅತಿವೃಷ್ಟಿಯಿಂದ ವಿಳಂಬವಾಗಿದೆ. ಇಷ್ಟರ ನಡುವೆಯೂ ಕಳೆದ 3 ತಿಂಗಳಿಂದ ಕಾಮಗಾರಿಯ ಪ್ರಗತಿಯ ಬಗ್ಗೆ ನಿಗಾ ವಹಿಸಲಾಗಿದೆ. ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ 2ನೇ ಬಾರಿ ಜಿಲ್ಲಾ ಪ್ರವಾಸ ಕೈಗೊಂಡಿದ್ದೇನೆ ಎಂದರು.
ಹುಬ್ಬಳ್ಳಿ ತೋಳನಕೆರೆಯ ಅಭಿವೃದ್ಧಿ ಕಾಮಗಾರಿಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಕೆರೆಯ ಕೊಳಚೆ ನೀರು ಶುದ್ಧೀಕರಣ ಘಟಕ ಪೂರ್ಣಗೊಂಡಿದೆ. ಘಂಟಿಕೇರಿ ಸರ್ಕಾರಿ ಮಾದರಿ ಕನ್ನಡ ಶಾಲೆ ಕಟ್ಟಡ ದುರಸ್ತಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದೆ. ಜನತಾ ಬಜಾರ್ ವಾಣಿಜ್ಯ ಮಳಿಗೆ ಸ್ಥಳಾಂತರ ಕಾರ್ಯ ನಡೆದಿದೆ ಎಂದು ತಿಳಿಸಿದರು.
ಕರೊನಾ ಕಾಲದಲ್ಲೂ ಹು-ಧಾ ಮಹಾನಗರ ಪಾಲಿಕೆ 34 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ. 4 ಕೋ. ರೂ. ಕೊರತೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ವಸೂಲಿಯಾಗುವ ನಿರೀಕ್ಷೆ ಇದೆ. ಉತ್ತಮ ಸೌಲಭ್ಯ ಕೊಟ್ಟರೆ ಜನರು ತೆರಿಗೆ ಕೊಡಲು ಹಿಂಜರಿಯುವುದಿಲ್ಲ. ಪಾಲಿಕೆಗೆ ಬರಬೇಕಾದ ಪಿಂಚಣಿ ಬಾಕಿ ಮೊತ್ತ ಬಿಡುಗಡೆ ಪ್ರಸ್ತಾವನೆ ಹಣಕಾಸು ಇಲಾಖೆ ಬಳಿಯಿದೆ. ರಾಜ್ಯದ ಬಳ್ಳಾರಿ, ಕಲಬುರ್ಗಿ, ವಿಜಯಪುರ ಹಾಗೂ ಮೈಸೂರು ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಸೇರ್ಪಡೆಗೆ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಹೇಳಿದರು.