ಜಿಲ್ಲೆ

ಕಾಮಗಾರಿ ಮಾಡದೆ 119 ಕೋಟಿ ರೂ. ದುರ್ಬಳಕೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ

ಮೈಸೂರು: ತೋಟಗಾರಿಕೆ ಸಚಿವ ಮುನಿರತ್ನ ತಮ್ಮ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಮಗಾರಿ ಮಾಡದೆ 119 ಕೋಟಿ ರೂ. ಅನುದಾನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.

ಸಚಿವ ಮುನಿರತ್ನ ಕ್ಷೇತ್ರದಲ್ಲಿ ಕಾಮಗಾರಿ ಮಾಡದೆ 219 ಕೋಟಿ ರೂ. ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ಅಂದಿನ ಲೋಕಾಯುಕ್ತರಾಗಿದ್ದ ವಿಶ್ವನಾಥಶೆಟ್ಟಿ ಹಿರಿಯ ಅಧಿಕಾರಿಗಳ ಮೂಲಕ ತನಿಖೆ ನಡೆಸಿ 114 ಕಾಮಗಾರಿಯ ಲೆಕ್ಕ ತೋರಿಸಿ 119 ಕೋಟಿ ರೂ. ಪಡೆಯಲಾಗಿದೆ ಎಂದು 2022ರ ಜೂನ್‌ನಲ್ಲಿ ಸರ್ಕಾರಕ್ಕೆ ವರದಿ ನೀಡಿದ್ದರು. ಆದರೆ, ಈವರೆಗೂ ಸಚಿವರ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎನ್ನುವುದಕ್ಕೆ ಇದಕ್ಕಿಂತಲೂ ದಾಖಲೆ ಬೇಕೇ? ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಹಣಕಾಸು ಇಲಾಖೆ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಅವರನ್ನು ಬ್ಲಾೃಕ್‌ಮೇಲ್ ಮಾಡಿ ಬಿಡುಗಡೆ ಮಾಡಿಸಿಕೊಂಡು ಶೇ.40 ಕಮಿಷನ್ ಇರಲಿ, ಸಂಪೂರ್ಣ ಕಾಮಗಾರಿ ಹಣವನ್ನೇ ಗುಳುಂ ಮಾಡಿದ್ದಾರೆ. ಬೆಂಗಳೂರಿನ ಬಹುತೇಕ ವಿಧಾನಸಭಾ ಕ್ಷೇತ್ರದಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಸುಮಾರು 5 ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ. ಇಷ್ಟು ದೊಡ್ಡ ಮಟ್ಟದ ಭ್ರಷ್ಟಾಚಾರ ತಮ್ಮ ಮೂಗಿನ ನೇರಕ್ಕೆ ನಡೆಯುತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ಸಮರ್ಪಕ ದಾಖಲೆ ನೀಡಲಿ, ತನಿಖೆ ಮಾಡುತ್ತೇವೆ’ ಎಂದು ಹೇಳುತ್ತಾರೆ. ಭ್ರಷ್ಟಾಚಾರ ಮಾಡುವವರು, ಕಮಿಷನ್ ಪಡೆಯುವವರು ದಾಖಲೆ ಇಟ್ಟುಕೊಂಡು ಮಾಡುತ್ತಾರೆಯೇ? ಇಂತಹ ಪ್ರಾಥಮಿಕ ಜ್ಞಾನ ಸಿಎಂ ಅವರಿಗಿಲ್ಲವೇ? ಎಂದು ಲೇವಡಿ ಮಾಡಿದರು.

ತನಿಖೆ ವಿಳಂಬ
ಕೊಡಗಿಗೆ ಭೇಟಿ ನೀಡಿದ್ದ ಸಮಯದಲ್ಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಈ ಕುರಿತು ಅಲ್ಲಿನ ಪೊಲೀಸರಿಗೆ ಲಿಖಿತವಾಗಿ ದೂರು ನೀಡಿದ್ದು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನನ್ನ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಆದರೆ, ಎಫ್‌ಐಆರ್ ದಾಖಲಿಸಿ ತನಿಖೆ ಮಾಡಲು ವಿಳಂಬ ಮಾಡಲಾಗುತ್ತಿದೆ. ಏಕೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಹೇಳಿದರು.