ಜಿಲ್ಲೆ

ಕಾಮಗಾರಿ ಬಿಲ್ ಪಾವತಿ ವಿಳಂಬ

ಹುಬ್ಬಳ್ಳಿ: ಕಾಮಗಾರಿ ಬಿಲ್ ಪಾವತಿ ವಿಳಂಬ, ಗುತ್ತಿಗೆದಾರ ಮೇಲೆ ಅಧಿಕಾರಿಗಳ ದಬ್ಬಾಳಿಕೆ ಮತ್ತು ಜಿಎಸ್​ಟಿ ಮರುಪಾವತಿಗೆ ಒತ್ತಾಯಿಸಿ ಇಂಡಿಯನ್ ರೈಲ್ವೆ ಇನ್ಪಾಸ್ಟ್ರಕ್ಚರ್ ಪ್ರೊವೈಡರ್ಸ್ ಅಸೋಸಿಯೇಷನ್ ವತಿಯಿಂದ ರೈಲ್ವೆ ಗುತ್ತಿಗೆದಾರರು ನಗರದಲ್ಲಿ ಶುಕ್ರವಾರ ಮೌನ ಪ್ರತಿಭಟನೆ ನಡೆಸಿದರು.

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೈಋತ್ಯ ರೈಲ್ವೆ ವಲಯದ ಮಹಾಪ್ರಬಂಧಕ ಎ.ಕೆ. ಸಿಂಗ್ ಹಾಗೂ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಅವರಿಗೆ ಗುತ್ತಿಗೆದಾರರು ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ, ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಗುತ್ತಿಗೆದಾರ ಡಿ. ವೆಂಕಟರೆಡ್ಡಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಲ್ ಪಾವತಿಸುವಲ್ಲಿ ಆದ ವಿಳಂಬ ಆತ್ಮಹತ್ಯೆಗೆ ಕಾರಣವೆಂದು ವೆಂಕಟರೆಡ್ಡಿ ಬರೆದಿದ್ದಾರೆ. ಆದರೂ ಗುತ್ತಿಗೆದಾರರ ಬಾಕಿ ಪಾವತಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ದೂರಿದರು. ಅಸೋಸಿಯೇಷನ್ ನೇತೃತ್ವದಲ್ಲಿ ದೇಶಾದ್ಯಂತ ರೈಲ್ವೆ ಗುತ್ತಿಗೆದಾರರು ಒಂದು ದಿನ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಈಗಾಗಲೇ ನಿರ್ವಹಿಸಿರುವ ಕಾಮಗಾರಿಗೆ 3-4 ತಿಂಗಳಿಂದ ಬಿಲ್ ಪಾವತಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈಲ್ವೆ ಅಧಿಕಾರಿಗಳು ಕೂಡಲೆ ರೈಲ್ವೆ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಬೇಕು. ಬಾಕಿ ಬಿಲ್​ಗಳನ್ನು ಶೀಘ್ರ ಪಾವತಿಸಬೇಕು. ಬಾಕಿ ಉಳಿದ ಜಿಎಸ್​ಟಿ ಹಣ ಮರುಪಾವತಿ ಮಾಡುವಂತೆ ಒತ್ತಾಯಿಸಿದರು. ರಮಣ ಮೂರ್ತಿ, ಸತ್ಯನಾರಾಯಣ, ಸೂರಜ್ ಜೈನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.