ಜಿಲ್ಲೆ

ಕಾಮಗಾರಿ ಕೈಗೊಳ್ಳದೆ ಯೋಜನೆಗಳ ದುರುಪಯೋಗ : ಪ್ರತಿಭಟನೆ

ಚನ್ನರಾಯಪಟ್ಟಣ: ತಾಲೂಕಿನ ಕಾವೇರಿ ನೀರಾವರಿ ನಿಗಮದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ ಆರೋಪಿಸಿದರು.


ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ, ಶಾಸಕ ಸಿ.ಎನ್.ಬಾಲಕೃಷ್ಣ ಅವರ ಅಣತಿಯಂತೆ ಕಾಮಗಾರಿ ಕೈಗೊಳ್ಳದೆ ಯೋಜನೆಗಳನ್ನು ದುರುಪಯೋಗ ಪಡಿಸಿಕೊಂಡು ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದರು.


ಶಾಸಕರ ಕುಟುಂಬಕ್ಕೆ ಬೇಕಾದ 4-5 ಮಂದಿ ಗುತ್ತಿಗೆದಾರರಿಗೆ ಕೆಲಸ ನೀಡುವುದರ ಮೂಲಕ ಕಾಮಗಾರಿ ಮಾಡದಿದ್ದರೂ ಬಿಲ್ ಮಂಜೂರು ಮಾಡಿಕೊಳ್ಳಲಾಗುತ್ತಿದೆ. ತಾಲೂಕಿನಲ್ಲಿ ಯಾರು ಯಾವುದೇ ಸರ್ಕಾರಿ ಕಾಮಗಾರಿ ಕೈಗೊಳ್ಳಬೇಕೆಂದರೆ ಶಾಸಕರಿಗೆ ಒಂದಷ್ಟು ಕಮಿಷನ್ ನೀಡಬೇಕು. ಎಲ್ಲಿಯೂ ಪಾರದರ್ಶಕ ಆಡಳಿವಿಲ್ಲ ಎಂದರು.


ಜೂನ್, ಜುಲೈ ತಿಂಗಳಲ್ಲಿ ಬಾಗೂರು ಹಾಗೂ ಇತರೆ ನಾಲೆಗಳ ಸಿಲ್ಟ್ ತೆಗೆಯುವ ಹಾಗೂ ಜಂಗಲ್ ಕ್ಲೀನಿಂಗ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಮಾಡಿರುವುದಾಗಿ ಬಿಲ್ ಮಾಡಿಕೊಳ್ಳಲಾಗಿದೆ. ಇದರಿಂದ ಲಕ್ಷಂತರ ರೂ, ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ದೂರಿದರು.


ಸಹಕಾರ ಸಂಘಗಳಲ್ಲಿ ಸಾಲವನ್ನು ಅನಧಿಕೃತ ವ್ಯವಸ್ಥೆಯೊಂದಿಗೆ ರಿನಿವರ್ ಮಾಡುವ ವೇಳೆ ತಲಾ 1 ಕೋಟಿಗೆ 3 ಲಕ್ಷ ರೂ.ನಂತೆ ಕಮಿಷನ್ ಶಾಸಕರ ಮನೆಗೆ ಹೋಗಲಿದೆ. ಇನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ತಮಗೆ ಬೇಕಾದಗಲೆಲ್ಲ ಕಮಿಷನ್ ರೂಪದಲ್ಲಿ ಹಣ ಪಡೆಯುತ್ತಿರುವ ದೂರು ಕೇಳಿಬಂದಿದ್ದು ಅಗತ್ಯ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.


ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ ಮಾತನಾಡಿ, ಶಾಸಕ ಸಿ.ಎನ್.ಬಾಲಕೃಷ್ಣ ಎಲ್ಲ ಇಲಾಖೆ ಅಧಿಕಾರಿಗಳನ್ನು ಎದುರಿಸಿಕೊಂಡು ತಮಗಿಷ್ಟ ಬಂದಂತೆ ಅಧಿಕಾರ ನಡೆಸುತ್ತಿರುವುದು ಸರಿಯಲ್ಲ. ಅವರು ಕಮಿಷನ್ ಇಲ್ಲದೆ ಕೈ ಹಾಕುವುದಿಲ್ಲ. ಶಾಸಕರನ್ನು ತಿದ್ದಲು ಸಾಧ್ಯವಿಲ್ಲ ಅದರ ಬದಲು ಮುಂದಿನ ಚುನಾವಣೆಯಲ್ಲಿ ಆ ಸ್ಥಾನಕ್ಕೆ ಕಾಂಗ್ರೆಸ್ ಶಾಸಕನನ್ನು ತರುವುದೊಂದೇ ಪರಿಹಾರ ಎಂದರು.


ತಾಲೂಕು ವ್ಯಾಪ್ತಿಯ ಸೊಸೈಟಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಜೆಡಿಎಸ್ ಕಚೇರಿಯಂತೆ ಮಾಡಿಕೊಂಡಿರುವ ಶಾಸಕರು ಅಗತ್ಯವಿರುವ ಕಡೆಗಳಲ್ಲಿ ಕಮಿಷನ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ನಡೆಸುವ ಅವ್ಯವಹಾರವನ್ನು ತಡೆಯುವವರ ಮೇಲೆ ದಬ್ಬಾಳಿಕೆ ಮಾಡುತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ತಾಲೂಕಿನಲ್ಲಿ ಮಾಡಿದ ಭ್ರಷ್ಟಾಚಾರ ಸಾಲದೆಂಬಂತೆ ರಾಜ್ಯ ಒಕ್ಕಲಿಗರ ಸಂಘದಲ್ಲಿಯೂ ತನ್ನ ಚೇಷ್ಟೆ ಮುಂದುವರಿಸಿದ್ದು ರಾಜ್ಯದ ಜನತೆಯೇ ನೋಡಿ ದಂಗಾಗಿ ಹೋಗಿದೆ. ತಾಲೂಕು ಕಂಡ 10 ಮಂದಿ ಶಾಸಕರಲ್ಲಿ ಸಿ.ಎನ್.ಬಾಲಕೃಷ್ಣ ದುರಾಡಳಿತದಲ್ಲಿ ಚಾಂಪಿಯನ್ ಎಂದು ಕುಡುಕಿದರು.


ಎಪಿಎಂಸಿ ಮಾಜಿ ನಿರ್ದೇಶಕ ಎಂ.ಶಂಕರ್ ಮಾತನಾಡಿ, ಎಲ್ಲ ತಾಲೂಕಿನಲ್ಲಿಯೂ ಒಬ್ಬರಂತೆ ಶಾಸಕರಿದ್ದರೆ ಚನ್ನರಾಯಪಟ್ಟಣ ತಾಲೂಕಿಗೆ ಮಾತ್ರ ಮೂವರು ಶಾಸಕರಿದ್ದಾರೆ. ಸಿ.ಎನ್.ಬಾಲಕೃಷ್ಣ ಅಧಿಕೃತ ಶಾಸಕರಾದರೆ ಅವರ ಸಹೋದರ ಸಿ.ಎನ್.ಪುಟ್ಟಸ್ವಾಮಿಗೌಡ ಕಾವೇರಿ ನೀರಾವರಿ ನಿಗಮಕ್ಕೆ ಒಂದುರೀತಿ ಶಾಸಕ ಇದ್ದಂತೆ. ಇನ್ನು ಸಿ.ಎನ್.ಬಾಲಕೃಷ್ಣರ ಪತ್ನಿ ಕುಸುಮರಾಣಿ ಕಸಬಾ ಹೋಬಳಿಗೆ ಪ್ರಥ್ಯೇಕ ಶಾಸಕರಿದ್ದಂತೆ ಎಂದು ಟಾಂಗ್ ನೀಡಿದರು.


ರೇವಣ್ಣನ ಮಕ್ಕಳ ಕಣ್ಣಿಗೆ ಸುಣ್ಣ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆಯ ಸಂಬಂದ ಬೆಳೆಸಿದ ಮೇಲೆ ಅವರ ಕೃಪಾಕಟಾಕ್ಷದಿಂದ ಸಿ.ಎನ್.ಬಾಲಕೃಷ್ಣ ಅವರಿಗೆ ರಾಜಕೀಯ ಯೋಗ ಬಂದಿದೆ. ದೇವೇಗೌಡರ ಹೆಸರಿನ ಮೇಲೆ ಗೆದ್ದು ಎರಡು ಬಾರಿ ಶಾಸಕನಾಗಿ ಬೀಗಿ ಅಧಿಕಾರ ಉಂಡಿರುವ ಬಾಲಕೃಷ್ಣ ಮೇಲ್ನೋಟಕ್ಕೆ ಮಾತ್ರ ಗೌಡರ ಕುಟುಂಬಕ್ಕೆ ಋಣಿಯಂತಿದ್ದಾರೆ. ಇದರಿಂದ ಒಕ್ಕಲಿಗರ ಸಂಘ, ಹಾಸನ ಹಾಲು ಒಕ್ಕೂಟ, ಹೇಮಾವತಿ ಸಕ್ಕರೆ ಕಾರ್ಖಾನೆ ಹೀಗೆ ಒಂದೊಂದೆ ಪದವಿ ಹೆಚ್ಚುತ್ತಾ ಹೋಗುತ್ತಿವೆ. ಆದರೆ ದೇವೇಗೌಡರ ಶಕ್ತಿಯಿಂದ ತನ್ನ ರಾಜಕೀಯ ವರ್ಚಸನ್ನು ಹೆಚ್ಚಿಸಿಕೊಂಡಿರುವ ಶಾಸಕ ಸಿ.ಎನ್.ಬಾಲಕೃಷ್ಣ ಶೀಘ್ರದಲ್ಲಿಯೇ ರೇವಣ್ಣನ ಮಕ್ಕಳ ಕಣ್ಣಿಗೆ ಸುಣ್ಣ ಬಳಿಯಲಿದ್ದಾರೆ. ಗೌಡರ ಕುಟುಂಬ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಮೇಲೆ ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ ಎಂದರು.


ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್‌ಗೆ ಕಾಂಗ್ರೆಸ್ ಮುಖಂಡರು ಮನವಿ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಪ್ರಮುಖರಾದ ಎಚ್.ಸಿ.ಲಲಿತ್ ರಾಘವ್, ಯುವರಾಜ್, ಮಿಲ್ಟ್ರಿ ಮಂಜು, ರವಿ ಹಾಗೂ ಇತರರು ಇದ್ದರು.