ಕಮಲನಗರ ತಾಲೂಕಿನ ಚಿಮ್ಮೇಗಾಂವ-ಮಾಳೆಗಾಂವ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಶನಿವಾರ ಶಾಸಕ ಪ್ರಭು ಚವ್ಹಾಣ್ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್‌ರಾದ ಅಮಿತಕುಮಾರ ಕುಲಕರ್ಣಿ, ಮಲಶೆಟ್ಟಿ ಚಿದ್ರೆ ಇತರರಿದ್ದರು. 
ಜಿಲ್ಲೆ

ಕಾಮಗಾರಿ ಕಳಪೆಯಾದರೆ ಸಹಿಸಲ್ಲ

ಕಮಲನಗರ: ನಾನು ಸಾಕಷ್ಟು ಪ್ರಯತ್ನಪಟ್ಟು ೨೧೪೭ ಕೋಟಿ ರೂ.ಮೊತ್ತದ ೬೭೫ ಕೆವಿ ಪವರ್ ಟ್ರಾನ್ಸ್ಮಿಷನ್ ಸಾಮರ್ಥ್ಯದ ಕರ್ನಾಟಕ ಮೊದಲ ಪವರ್ ಗ್ರಿಡ್ ವಿದ್ಯುತ್ ಉಪ ಕೇಂದ್ರವನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಕೆಲಸ ಸರಿಯಾಗಿ ಮತ್ತು ಗುಣಮಟ್ಟದಿಂದ ಆಗಬೇಕು. ಶೀಘ್ರ ಪೂರ್ಣಗೊಳಿಸುವ ಭರದಲ್ಲಿ ಕೆಲಸ ಕಳಪೆ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ನಿರ್ಲಕ್ಷ್ಯವಹಿಸಿದರೆ ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲವೆಂದು ಎಂದು ಶಾಸಕ ಪ್ರಭು ಚವ್ಹಾಣ್ ಎಚ್ಚರಿಸಿದರು.

ತಾಲೂಕಿನ ಚಿಮ್ಮೇಗಾಂವ-ಮಾಳೆಗಾಂವ ಗ್ರಾಮಗಳ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಶನಿವಾರ ದಿಢೀರ್ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು, ಪವರ್ ಗ್ರಿಡ್ ಉಪ ಕೇಂದ್ರದ ಸುತ್ತಲಿನ ರೈತರಿಗೆ ಓಡಾಡಲು ಹಿಂದಿನಿಂದಲೂ ಬಳಕೆ ಮಾಡುತ್ತಿದ್ದ ಕಾಲುದಾರಿ ಮುಚ್ಚಿದ್ದರಿಂದ ರೈತರು ತಮ್ಮ ಕೃಷಿ ಜಮೀನಿಗೆ ಹೋಗಲು ೭-೮ ಕಿಮೀ ಸುತ್ತಾಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ತಹಸೀಲ್ದಾರ್‌ರು ರೈತರಿಗೆ ಸಹಾಯ ಮಾಡಬೇಕು. ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದರು.

ಸರಿಯಾಗಿ ಕ್ಯೂರಿಂಗ್ ಆಗುತ್ತಿಲ್ಲ. ನಿಗಾವಹಿಸಿ, ಗುಂಡಿಗಳನ್ನು ಅಗೆಯಲು ಸ್ಪೋಟಕಗಳನ್ನು ಬಳಕೆ ಮಾಡುತ್ತಿದ್ದು, ಇದರಿಂದ ಸುತ್ತಲಿನಲ್ಲಿರುವ ಬೋರ್‌ವೆಲ್ ನೀರು ಬತ್ತಿ ಹೋಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ. ತೀವ್ರ ಅವಶ್ಯಕತೆಯ ಸಂದರ್ಭವನ್ನು ಹೊರತುಪಡಿಸಿ ಡ್ರಿಲ್ಲಿಂಗ್ ಮೂಲಕ ಗುಂಡಿಗಳನ್ನು ಅಗೆಯಬೇಕು. ಸ್ಥಳೀಯರಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕೆಂದು ಪವರ್ ಗ್ರಿಡ್ ಕಾರ್ಪೋರೇಷನ್ ಲಿಮಿಟೆಡ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗಣೇಶ ಅವರನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಸೂಚಿಸಿದರು.

ಕಮಲನಗರ ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ, ಔರಾದ(ಬಿ) ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಗ್ರಾಪಂ ಅಧ್ಯಕ್ಷೆ ಯಶೋಧಾ ಸಂತೋಷ, ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಪ್ರವೀಣ ಕಾರಬಾರಿ, ಬಾಬುರಾವ ತೋರ್ಣಾವಾಡಿ, ಸಚಿನ ರಾಠೋಡ್, ರಾಜಕುಮಾರ ಅಲಬಿದೆ, ಸಚಿನ ಬಿರಾದಾರ, ಅನಿಲ ಬಿರಾದಾರ ಇತರರಿದ್ದರು.

ಕಾಮಗಾರಿ ಗುಣಮಟ್ಟ ವೀಕ್ಷಣೆ: ಕಾಮಗಾರಿ ಸ್ಥಳದಲ್ಲಿ ಸಂಚರಿಸಿದ ಶಾಸಕ ಚವ್ಹಾಣ್ ಸ್ಥಳದಲ್ಲಿದ್ದ ಅಧಿಕಾರಿಗಳ ಮೂಲಕ ಮಾಹಿತಿ ಪಡೆದರು. ನಂತರ ಟಾವರ್‌ಗಳ ನಿರ್ಮಾಣ, ಕಟ್ಟಡಗಳ ನಿರ್ಮಾಣ ಸ್ಥಳ ಮತ್ತು ಯಂತ್ರಗಳ ಬಳಿಗೆ ತೆರಳಿ ಗುಣಮಟ್ಟವನ್ನು ವೀಕ್ಷಿಸಿದರು. ಬುನಾದಿ ಕಾಮಗಾರಿಯಲ್ಲಿ ಸರಿಯಾಗಿ ಕ್ಯೂರಿಂಗ್ ಮಾಡದ ಕಾರಣ ಸಿಮೆಂಟ್ ಎದ್ದು ಕಾಣುತ್ತಿದೆ. ಬೇಸಿಗೆ ಆರಂಭವಾಗಿದ್ದು, ಬಿಸಿಲು ದಿನೇ ದಿನೇ ಹೆಚ್ಚುತ್ತಿದೆ. ಆದರೂ ಸಿಮೆಂಟ್ ಕೆಲಸಗಳಿಗೆ ನೀರಿನ ಬಳಕೆ ಏಕೆ ಮಾಡುತ್ತಿಲ್ಲವೆಂದು ಅಧಿಕಾರಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಸ್ಥಳೀಯರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನಪಟ್ಟು ಯೋಜನೆಯನ್ನು ಕ್ಷೇತ್ರಕ್ಕೆ ತಂದಿದ್ದೇನೆ. ಆದರೆ ಕೆಲಸಗಾರರನ್ನು ಬೇರೆಡೆಯಿಂದ ತರುತ್ತಿರುವ ಬಗ್ಗೆ ಜನತೆ ಹೇಳುತ್ತಿದ್ದಾರೆ. ಕೆಲಸಗಾರರ ನೇಮಕಾತಿಯಲ್ಲಿ ಕಮಲನಗರ ಮತ್ತು ಔರಾದ್(ಬಿ) ತಾಲೂಕಿನವರಿಗೆ ಮೊದಲ ಆದ್ಯತೆ ನೀಡಬೇಕು. ತಾಂತ್ರಿಕ ಸಿಬ್ಬಂದಿ ಸ್ಥಳೀಯರು ಲಭ್ಯವಿಲ್ಲದ ಪಕ್ಷದಲ್ಲಿ ಬೇರೆಯರವನ್ನು ತರಬಹುದು. ಯೋಜನೆಗೆ ಜಮೀನು ನೀಡಿದ ರೈತರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು.

| ಪ್ರಭು ಚವ್ಹಾಣ್, ಶಾಸಕ