ಶ್ರೀಮಂಗಲ: ಭಾರತೀಯ ರೈತ ಪರ ಸಂಘಟನೆಗಳ ಒಕ್ಕೂಟ (ಸಿಫಾ) ಬೆಂಬಲದೊಂದಿಗೆ ಕೊಡಗಿನ ಎಲ್ಲ ಬೆಳೆಗಾರರಿಗೆ ಲಾಭದಾಯಕ ಬೆಲೆ ಹಾಗೂ ಕಾಫಿಯನ್ನು ರಾಷ್ಟ್ರೀಯ ಪಾನೀಯವಾಗಿ ಘೋಷಿಸಬೇಕೆಂದು ಹೋರಾಟ ನಡೆಸಲಾಗುವುದು ಎಂದು ಕಾಫಿ ರಾಷ್ಟ್ರೀಯ ಪಾನೀಯ ಆಂದೋಲನ ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ ತಿಳಿಸಿದರು.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾವೇಶದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಅವರು ಕಾಫಿ ಬೆಳೆಗಾರರ ಸಮಸ್ಯೆ ಬಗೆ ಗಮನ ಸೆಳೆಯಲಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು. 2024 ಲೋಕಸಭಾ ಚುನಾವಣೆಯೊಳಗೆ ಈ ಬಗ್ಗೆ ಘೋಷಿಸಲು ಬೆಂಗಳೂರಿನಲ್ಲಿ ನಡೆದ ಎಲ್ಲ ರಾಜ್ಯಗಳ ರೈತ ಪರ ಸಂಘಟನೆಗಳ ಒಕ್ಕೂಟದ ಸಮಾವೇಶದಲ್ಲಿ ನಿರ್ಣಯ ಮಂಡಿಸಲಾಗಿದೆ. ಕಾಫಿ ಉತ್ಪಾದನೆಯಲ್ಲಿ ಸಣ್ಣ ಬೆಳೆಗಾರರ ಪಾತ್ರ ಹೆಚ್ಚಾಗಿದೆ. ಕಾಫಿ ಬೆಳೆಗಾರರ ಅಂಕಿ ಅಂಶ ಪ್ರಕಾರ ಶೇ.90ರಷ್ಟು ಸಣ್ಣ ಬೆಳೆಗಾರರಿದ್ದಾರೆ. ಆದರೆ ಭಾರತೀಯ ಕಾಫಿ ಮಂಡಳಿಯಲ್ಲಿ ಸಣ್ಣ ಕಾಫಿ ಬೆಳೆಗಾರರಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದುಅಸಮಾಧಾನ ವ್ಯಕ್ತಪಡಿಸಿದರು.
ಕಾಫಿ ಬೆಳೆ ಉತ್ಪಾದನಾ ವೆಚ್ಚ ಬಹಳ ಏರಿದೆ. ದೇಶದಲ್ಲಿ ಒಟ್ಟು ಕಾಫಿ ಉತ್ಪಾದನೆ ಮಾಡುವ ವಿಸ್ತೀರ್ಣ ಹಾಗೂ ಅದಕ್ಕೆ ಅನುಸಾರ ಕಾಫಿ ಉತ್ಪಾದನೆ ಸರಾಸರಿ ತೆಗೆದುಕೊಂಡರೆ ಪ್ರತಿ ಎಕರೆಗೆ 10 ರಿಂದ 15 ಚೀಲ ಕಾಫಿ ಮಾತ್ರ ಬೆಳೆಯಲಾಗುತ್ತದೆ. ಇದರಿಂದ ಪ್ರತಿ ಎಕರೆಗೆ ಉತ್ಪಾದನಾ ವೆಚ್ಚ 30 ರಿಂದ 40 ಸಾವಿರದಷ್ಟು ನಷ್ಟವಾಗುತ್ತಿರುವ ಬಗ್ಗೆ ಗಮನ ಸೆಳೆಯಲಾಗಿದೆ ಎಂದು ರವೀಂದ್ರ ವಿವರಿಸಿದರು.
ಸಮಾವೇಶದಲ್ಲಿ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಿ ಕನಿಷ್ಠ 100 ಸಂಸದರೊಂದಿಗೆ ದೆಹಲಿಗೆ ತೆರಳಿ ದೇಶದ ಇತರ ಬೆಳೆಗಾರರ ಸಮಸ್ಯೆ ಹಾಗೂ ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆಯನ್ನು ಪರಿಗಣಿಸುವಂತೆ ಒತ್ತಡ ಹೇರಲಾಗುವುದೆಂದು ಸಿಫಾ ರಾಷ್ಟ್ರೀಯ ಅಧ್ಯಕ್ಷ ರಘುನಾಥ್ ದಾದಾ ಪಾಟೀಲ್ ಸಮಾವೇಶದಲ್ಲಿ ಭರವಸೆ ನೀಡಿದ್ದಾರೆ ಎಂದು ರವೀಂದ್ರ ವಿವರಿಸಿದರು.
ಕಳಪೆ ಗುಣಮಟ್ಟದ ಕಾಳುಮೆಣಸು: ಕಾಫಿ ಕೆಫೆಗಳಲ್ಲಿ ಒಂದು ಕೆಜಿ ಕಾಫಿ ಬೀಜಕ್ಕೆ 1,520 ರೂ.ಬೆಲೆ ಇದೆ. ಇದರ ಪ್ರಕಾರ ಒಂದು ಚೀಲ ಕಾಫಿ ಬೆಳೆಯುವ ರೈತನಿಗೆ ಕೇವಲ 3,500 ರಿಂದ 4,000 ರೂ. ಮಾತ್ರ ಸಿಗುತ್ತಿದೆ. ಕಾಫಿ ಬೆಳೆಗಾರನಿಗೆ ಕಾಫಿ ಕೆಫೆಗಳಲ್ಲಿ ದೊರೆಯುವ ದರದ ಅರ್ಧ ಭಾಗವಾದರೂ ಸಿಗಬೇಕು. ಇದಕ್ಕೆ ಸಿಫಾ ಬೆಂಬಲ ನೀಡಬೇಕೆಂದು ಕೋರಲಾಗಿದೆ. ಈ ಸಂದರ್ಭ ಕೊಡಗಿನ ಇತರ ಬೆಳೆ ಕಾಳು ಮೆಣಸುಗೆ ವಿದೇಶದಿಂದ ಆಮದಾಗುವ ಕಳಪೆ ಗುಣಮಟ್ಟದ ಕಾಳುಮೆಣಸನ್ನು ಮಿಶ್ರ ಮಾಡಿ ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ನಿರ್ಣಯ ಕೈಗೊಳ್ಳಲಾಗಿದೆ.ಅಡಕೆ ಬೆಳೆಗೆ ಕಪ್ಪು ಚುಕ್ಕೆ ಮತ್ತು ಹಳದಿರೋಗ ನಿಯಂತ್ರಿಸಲು ಸರ್ಕಾರ ತಕ್ಷಣ ಕೃಷಿ ತಜ್ಞರ ತಂಡ ನೇಮಿಸಿ ಅದಕ್ಕೆ ಕ್ರಮ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ರವೀಂದ್ರ ವಿವರಿಸಿದರು.