ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯ ಜಲಪಾತಗಳ ಬಂಡೆ ಏರಿ ಹುಚ್ಚಾಟ ನಡೆಸುತ್ತಿರುವ ನಾಲ್ವರು ಯುವಕರು. 
ಜಿಲ್ಲೆ

ಕಾಫಿನಾಡಿನಲ್ಲಿ ಮುಂದುವರಿದ ಮಳೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗಳವಾರವೂ ಧಾರಾಕಾರ ಮಳೆ ಮುಂದುವರಿದಿದೆ. ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಮಳೆಯಿಂದಾಗಿ ಅವಘಡಗಳು ಮುಂದುವರಿದಿವೆ.

ಭಾರಿ ಮಳೆಯಿಂದಾಗಿ ಜಿಲ್ಲೆಯ ಮೂಡಿಗೆರೆ ಹಾಗೂ ಕೊಪ್ಪ ತಾಲೂಕುಗಳಲ್ಲಿ ಭಾರಿ ಅವಘಡಗಳು ಸಂಭವಿಸುತ್ತಿವೆ. ಮೂಡಿಗೆರೆ ತಾಲೂಕಿನ ಪಲ್ಗುಡಿ ಸಮೀಪದ ಬಗಸಗೋಡು ಚಕ್ಕಮಕ್ಕಿಯಲ್ಲಿ ಕೊಟ್ಟಿಗೆ ಕುಸಿದು ಮೂರು ಕುರಿಗಳು ಸಾವನ್ನಪ್ಪಿದ್ದು, ದನಗಳಿಗೆ ಗಾಯಗಳಾಗಿವೆ.

ಕೊಪ್ಪ ತಾಲೂಕಿನ ಬಿಂತ್ರವಳ್ಳಿ ಗ್ರಾಮದಲ್ಲಿ ಮನೆ ಪಕ್ಕದಲ್ಲಿದ್ದ ಧರೆ ಕುಸಿದ ಪರಿಣಾಮ ಕಲ್ಲು ಮಣ್ಣು ಮನೆ ಬಳಿಯೇ ಬಂದು ನಿಂತಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದೆ ಆದಲ್ಲಿ ಮನೆಗೆ ಹಾನಿಯಾಗುವ ಸಾಧ್ಯತೆ ಇದೆ. ಇನ್ನು ಕೊಪ್ಪ ತಾಲೂಕಿನ ಕಲ್ಲುಗುಡ್ಡೆ ಗ್ರಾಮದಲ್ಲಿ ಮನೆ ಪಕ್ಕದ ಶೆಡ್ ಮೇಲೆ ಅಡಕೆ ಮರ ಮುರಿದು ಬಿದ್ದು ಹಾನಿ ಸಂಭವಿಸಿದೆ. ಕೂದಲನೆಲೆ ಅಂತರದಲ್ಲಿ ಮನೆಯ ಮೇಲ್ಚಾವಣಿ ಮೇಲೆ ಅಡಕೆ ಮರ ಬೀಳುವುದು ತಪ್ಪಿದ್ದರಿಂದಾಗಿ ದೊಡ್ಡ ಅನಾಹುತ ತಪ್ಪಿದೆ.

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿಯೂ ಮಳೆ ಮುಂದುವರೆದಿದ್ದು ಸೀತಾಳಯ್ಯನಗಿರಿ ಭಾಗದಲ್ಲಿ ರಸ್ತೆಗೆ ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ರಸ್ತೆಗೆ ಬಿದ್ದಿರುವ ಮರಗಳನ್ನು ಪೊಲೀಸ್ ಸಿಬ್ಬಂದಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲತ್ತಿಗಿರಿ ಜಲಪಾತಕ್ಕೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು ಇದೆ ತಾಣ ವ್ಯಾಪ್ತಿಯ ರಾಜ್ಯ ಹೆದ್ದಾರಿ 57ಕ್ಕೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಪೊಲೀಸರು ತೆರವುಗೊಳಿಸಿದ್ದಾರೆ.

ಬೈಕ್ ಸವಾರರಿಗೆ ಸಲಹೆ

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮಳೆ ಹೆಚ್ಚಿರುವ ಕಾರಣ ಗಿರಿ ಶ್ರೇಣಿಯ ಸೌಂದರ್ಯ ದುಪ್ಪಟ್ಟಾಗಿದೆ. ಹೀಗಾಗಿ ಮಂಜು ಮತ್ತು ಮಳೆಯ ಕಣ್ಣಮುಚ್ಚಾಲೆಯ ಗಿರಿಶ್ರೇಣಿಯನ್ನು ಕಣ್ತುಂಬಿಕೊಳ್ಳಲು ನೂರಾರು ಪ್ರವಾಸಿಗರು ಬೈಕ್ ನಲ್ಲಿ ಆಗಮಿಸುತ್ತಿದ್ದಾರೆ.

ಧಾರಾಕಾರ ಮಳೆ ಹಾಗೂ ಗಾಳಿಯಿಂದಾಗಿ ಗಿರಿ ಶ್ರೇಣಿಯ ಜಾರುತ್ತಿವೆ ಹಾಗೂ ಎಲ್ಲೆಂದರಲ್ಲಿ ಮರಗಳು ರಸ್ತೆಗೆ ಅಡ್ಡಲಾಗಿ ಬೀಳುತ್ತಿವೆ.

ಇದನ್ನು ಮನಗಂಡ ಪೊಲೀಸ್ ಅಧಿಕಾರಿಗಳು ಚಿಕ್ಕಮಗಳೂರು ಹೊರವಲಯದಲ್ಲಿರುವ ಗಿರಿಶ್ರೇಣಿಗೆ ಸಂಪರ್ಕ ಕಲ್ಪಿಸುವ ಕೈಮರ ಚೆಕ್ ಪೋಸ್ಟ್ ಬಳಿ ಬೈಕ್ ಸವಾರರಿಗೆ ಸೂಕ್ತ ಸಲಹೆ ಸೂಚನೆ ನೀಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರವಾಸಿಗರ ಹುಚ್ಚಾಟ

ಚಾರ್ಮಾಡಿ ಘಾಟಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದಾಗಿ ಎಲ್ಲೆಡೆಯೂ ಜಲಪಾತಗಳು ನಿರ್ಮಾಣಗೊಂಡಿವೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರವಾಸಿಗರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಿ ಜಾರುವ ಬಂಡೆಗಳನ್ನು ಹತ್ತಿ ಫೋಟೋ ತೆಗೆಸಿಕೊಂಡು ಹುಚ್ಚಾಟ ನಡೆಸುತ್ತಿದ್ದಾರೆ.

ಪೊಲೀಸರು ಈ ಮಾರ್ಗದಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿದ್ದರೂ ಪೊಲೀಸರು ಒಂದು ಕಡೆಯಿಂದ ಮತ್ತೊಂದು ಕಡೆ ಹೋಗುತ್ತಿದ್ದಂತೆ ಮತ್ತೆ ಜಾರುವ ಬಂಡೆಗಳನ್ನು ಏರುವ ಮೂಲಕ ಅಪಾಯ ತಂದುಕೊಳ್ಳುತ್ತಿದ್ದಾರೆ.

ಇನ್ನು ಚಾರ್ಮಾಡಿ ಘಾಟ್ನ ಸೌಂದರ್ಯ ಕಣ್ತುಂಬಿಕೊಳ್ಳಲು ಈ ಮಾರ್ಗವಾಗಿ ಪ್ರಯಾಣಿಸುವ ಪ್ರವಾಸಿಗರು ಎಲ್ಲಿಂದರಲ್ಲಿ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದು ಪೊಲೀಸರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.

ನಾಲ್ವರ ವಿರುದ್ಧ ಪ್ರಕರಣ

ಚಾರ್ಮಾಡಿ ಘಾಟಿಯಲ್ಲಿನ ಜಲಪಾತಗಳ ಬಂಡಗಳನ್ನು ಏರಬಾರದು ಎಂದು ಈ ಹಿಂದೆಯೇ ಪೊಲೀಸ್ ಇಲಾಖೆ ಸೂಚನೆ ನೀಡಿತ್ತು. ಪೊಲೀಸ್ ಇಲಾಖೆಯ ಸೂಚನೆಯನ್ನು ಧಿಕ್ಕರಿಸಿ ಕೆಲವರು ಜಾರುವ ಬಂಡೆಯನ್ನು ಏರುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.

ಪೋಲಿಸ್ ಇಲಾಖೆಯ ಸೂಚನೆಯನ್ನು ಧಿಕ್ಕರಿಸಿ ಚಾರ್ಮಾಡಿ ಘಾಟಿಯ ಜಲಪಾತಗಳ ಬಂಡೆ ಏರುತ್ತಿದ್ದ ನಾಲ್ವರು ಯುವಕರ ಮೇಲೆ ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಯಾರಾದರೂ ಬಂಡೆಗಳನ್ನು ಏರಿ ಹುಚ್ಚಾಟ ನಡೆಸಿದಲ್ಲಿ ಅವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.