ಜಿಲ್ಲೆ

ಕಾಫಿಗೆ ಪರಿಹಾರ ನೀಡುವಾಗ 10 ಹೆಕ್ಟೇರ್ ಪರಿಗಣಿಸಿ

ಚಿಕ್ಕಮಗಳೂರು: ಕಾಫಿ ಬೆಳೆಯುವ ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದ ಕಾಫಿ, ಕಾಳುಮೆಣಸು ಬೆಳೆ ಬಹಳಷ್ಟು ನಷ್ಟವಾಗಿದೆ. ಹಾಗಾಗಿ ಪರಿಹಾರ ನೀಡುವಾಗ 10 ಹೆಕ್ಟೇರ್​ವರೆಗೆ ಗಣನೆಗೆ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ.ಮೋಹನ್​ಕುಮಾರ್ ಒತ್ತಾಯಿಸಿದ್ದಾರೆ.

ಜುಲೈನಲ್ಲಿ ಕಾಫಿ ಮಂಡಳಿ ಅಧಿಕಾರಿಗಳು ತೋಟಗಳಿಗೆ ಭೇಟಿ ನೀಡಿದಾಗ ಶೇ.30ರಿಂದ 40 ನಷ್ಟವಾಗಿದೆ ಎಂದು ಅಂದಾಜಿಸಿದ್ದರು. ಆದರೆ ಮಳೆ ತೀವ್ರವಾಗಿ ಹಾನಿ ಪ್ರಮಾಣವೂ ಅಧಿಕವಾಗಿದೆ. ರಾಷ್ಟ್ರೀಯ ವಿಪತ್ತು ಯೋಜನೆಯಡಿ ಸರ್ಕಾರ 2 ಹೆಕ್ಟೇರ್ ಪ್ರದೇಶಕ್ಕೆ ಪರಿಹಾರ ಸೀಮಿತಗೊಳಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡುವ 1 ಹೆಕ್ಟೇರ್​ಗೆ 56 ಸಾವಿರ ರೂ. ಪರಿಹಾರ ತೋಟ ನಿರ್ವಹಣೆಗೂ ಸಾಕಾಗುವುದಿಲ್ಲ. ಹಾಗಾಗಿ ಪರಿಹಾರ ನೀಡುವಾಗ 10 ಹೆಕ್ಟೇರ್​ವರೆಗೆ ಪರಿಗಣಿಸಿದರೆ ಮಾತ್ರ ಕಾಫಿ ಉದ್ಯಮ ಉಳಿಯಲು ಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ.

2014ರಿಂದಲೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಬೆಳೆಗಾರರಿಗೆ ಬ್ಯಾಂಕ್ ಸಾಲ ಪಾವತಿಯೂ ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್​ಗಳು ಸರ್ಫೆಸಿ ನೋಟಿಸ್ ನೀಡಿರುವುದರಿಂದ ಕಾಫಿ ಬೆಳೆಗಾರರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಹಾಗಾಗಿ ಸರ್ಫೆಸಿ ಕಾಯ್ದೆಯಿಂದ ರೈತ ಬೆಳೆಗಾರರನ್ನು ಹೊರಗಿಡುವಂತೆ ಒತ್ತಾಯಿಸಿದ್ದಾರೆ.