ಜಿಲ್ಲೆ

ಕಾಫಿಗೆ ಏರಿಕೆಯಾದರೂ ಬೆಳೆಗಾರರಿಗೆ ದಕ್ಕದೆ ಬೆಲೆ ಮರೀಚಿಕೆ:ಟಿ.ಪಿ. ಸುರೇಂದ್ರ

ಹಾಸನ: ಕಳೆದ ಹಂಗಾಮಿನಲ್ಲಿ ದರ ಏರಿಕೆಯಾದರೂ ಬೆಳೆಗಾರರಿಗೆ ಅದು ದಕ್ಕದೆ ಕಾಫಿ ಬೆಲೆ ಮರೀಚಿಕೆಯಾಗಿದೆ ಎಂದು ಕರ್ನಾಟಕ ಗ್ರೋವರ್ಸ್ ಫೆಡರೇಷನ್ ನಿರ್ದೇಶಕ ಟಿ.ಪಿ. ಸುರೇಂದ್ರ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ ಗಗನಕ್ಕೇರಿದ ಕಾಫಿ ಬೆಲೆ, ಕಾಫಿಗೆ ದಾಖಲೆ ಬೆಲೆ, ಇತ್ಯಾದಿ ಶೀರ್ಷಿಕೆ ಅಡಿಯಲ್ಲಿ ಬಹುತೇಕ ವರ್ಣರಂಜಿತ ವರದಿಗಳೇ ಪ್ರಕಟವಾಗುತ್ತಿದೆ. ಆದರೆ ಕಾಫಿ ಬೆಲೆ ಕಳೆದ 30 ವರ್ಷಗಳಲ್ಲಿ ಅತ್ಯಧಿಕ ಮಟ್ಟ ತಲುಪಿದ್ದು, ದಾಖಲೆಗಳಲ್ಲಿ ನಮೂದು ಮಾಡಲು ಮಾತ್ರವೇ ಹೊರತು ವಾಸ್ತವ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿದೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ತೀವ್ರ ಹವಾಮಾನ ವೈಪರೀತ್ಯದ ಪರಿಣಾಮ ಕಾಫಿ ಉತ್ಪಾದಿಸುವ ಪ್ರಮುಖ ದೇಶಗಳಲ್ಲಿ ಉತ್ಪಾದನೆ ಕುಂಟಿತವಾದ ಹಿನ್ನೆಲೆ ಕಾಫಿ ಬೆಲೆ ಏರಿಕೆ ಕಂಡಿದ್ದು ವಾಸ್ತವ.ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಕಾಫಿ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದ್ದರೂ, ಇದರ ನೇರ ಫಲಾನುಭವಿ ಬೆಳೆಗಾರ ಅಲ್ಲ. ಜಾಗತಿಕ ಮಟ್ಟದಲ್ಲಿ ಭಾರತದ ಕಾಫಿ ಗುಣಮಟ್ಟ ಉತ್ತಮವಾಗಿದ್ದರೂ, ನಮ್ಮ ಉತ್ಪಾದನೆ ಪ್ರಮಾಣ ಶೇ.5 ರಷ್ಟು ಇರುವುದರಿಂದ ಅದು ನಮಗೆ ತಲುಪಿಲ್ಲ ಎಂದರು.
ಜಗತ್ತಿನಾದ್ಯಂತ ಕಾಫಿ ಸೇವಿಸುವ ಗ್ರಾಹಕರು ನೀಡುವ ಮೌಲ್ಯಕ್ಕೂ, ಶ್ರಮವಹಿಸಿ ಉತ್ತಮ ಗುಣಮಟ್ಟ ಉತ್ಪಾದಿಸುವ ಬೆಳೆಗಾರನಿಗೆ ಸಿಗುವ ದರಕ್ಕೂ ಶೇ.90 ರಷ್ಟು ಅಂತರವಿದೆ. ಅಂದರೆ ಜಾಗತಿಕವಾಗಿ ಒಟ್ಟಾರೆ ಕಾಫಿ ವಹಿವಾಟಿನ ಪ್ರಮಾಣದ ಶೇ.10 ಕ್ಕಿಂತಲೂ ಕಡಿಮೆ ಮೌಲ್ಯ ಬೆಳೆಗಾರನ ಕೈ ಸೇರುತ್ತಿದೆ ಎಂದು ಹೇಳಿದರು.
2024 ರಲ್ಲಿ ಲಭಿಸಿರುವ ಈ ದರ ಏರಿಕೆ, ಬೆಳೆಗಾರರಿಗೆ ಕೇವಲ ಆಮ್ಲಜನಕದ ರೀತಿ ಸಹಾಯವಾಗಬಹುದಷ್ಟೆ. ಕಳೆದ 3 ದಶಕದಿಂದ ಸತತವಾಗಿ ಹಲವಾರು ಸವಾಲು ಎದುರಿಸಿ ತೋಟಗಳನ್ನು ನಿರ್ವಹಿಸಿಕೊಂಡು ಬಂದಿದ್ದ ಬೆಳೆಗಾರರು, ಕಳೆದ ಕೆಲ ವರ್ಷಗಳಿಂದ ಬಹುತೇಕ ಭರವಸೆಯನ್ನೇ ಕಳೆದುಕೊಂಡಿದ್ದರು.
2023-24 ರಲ್ಲಿಯೂ ಕೂಡ ನಿರೀಕ್ಷಿತ ಪ್ರಮಾಣದ ಫಸಲು ಇರಲಿಲ್ಲ. ಈ ಸಂದರ್ಭದಲ್ಲಿ ಈ ಬೆಲೆ ಏರಿಕೆ ಎಂಬುದು ಬೆಳೆಗಾರರಲ್ಲಿ ಒಂದು ಭರವಸೆ ಮೂಡಿಸುವಲ್ಲಿ ಸಹಕಾರಿಯಾಗಿದೆ ಅಷ್ಟೆ. ಈ ಬೆಲೆ ಏರಿಕೆಯಿಂದಾಗಿ ಬೆಳೆಗಾರರಿಗೆ ವೈಯಕ್ತಿಕವಾಗಿ ಹಾಗೂ ಕಾಫಿ ಉದ್ಯಮಕ್ಕೆ ಸಮಗ್ರವಾಗಿ ಯಾವುದೇ ಗಮನಾರ್ಹವಾದಂತಹ ಬದಲಾವಣೆಯಾಗಲಿ, ಪ್ರಗತಿಯಾಗಲಿ ಈವರೆವಿಗೂ ಕಂಡುಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಇದೇ ರೀತಿ ಮುಂದುವರೆದಲ್ಲಿ ಹಾಗೂ ಕಾರ್ಮಿಕರ ಕೊರತೆ, ವನ್ಯಜೀವಿ ಹಾವಳಿ, ಬ್ಯಾಂಕ್ ಸಾಲದ ಹೊರೆ ಹಾಗೂ ನಿರ್ವಹಣಾ ವೆಚ್ಚದಲ್ಲಿ ತೀವ್ರ ಏರಿಕೆ ಇತ್ಯಾದಿಗಳಿಂದಾಗಿ ಈಗಿರುವ ದಾಖಲೆ ಬೆಲೆ ಕೂಡ ನಗಣ್ಯವಾಗಬಹುದು.
ಕಳೆದ 5 ವರ್ಷಗಳಿಂದೀಚೆಗೆ ಕೋವಿಡ್, ಸತತ 2 ವರ್ಷ ಅತಿವೃಷ್ಟಿ/ಆಕಾಲಿಕ ಮಳೆ ಹಾಗೂ 1 ವರ್ಷ ಅನಾವೃಷ್ಟಿ ಒಂದೆಡೆಯಾದರೆ ಈ ವರ್ಷ ಹಿಂದೆಂದೂ ಕಾಣದ ತೀವ್ರ ಬರಗಾಲದ ಪರಿಸ್ಥಿತಿ ಮಲೆನಾಡನ್ನೂ ಸುಡುವಂತೆ ಮಾಡಿದೆ. ಜಲಮೂಲಗಳು ಬತ್ತಿಹೋಗಿವೆ. ಇದು ಮುಂದಿನ ವರ್ಷದ ಕಾಫಿ ಉತ್ಪಾದನೆ ಮೇಲೆ ಯಾವ ರೀತಿ ಕರಿನೆರಳು ಬೀಳ ಬಹುದು ಎಂಬುದನ್ನು ಊಹಿಸಲೂ ಭಯವಾಗುತ್ತಿದೆ ಎಂಬ ಆತಂಕ ಹೊರ ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಎ.ಎಸ್.ಪರಮೇಶ್, ಗೌರವ ಕಾರ್ಯದರ್ಶಿ ಕೆ.ಬಿ. ಲೋಹಿತ್, ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ, ಖಜಾಂಚಿ ಎಂ.ಜೆ. ಸಚಿನ್ ಇದ್ದರು.