ಹಾಸನ: ಸಕಲೇಶಪುರದಲ್ಲಿ ನಡೆದ ಕಾಫಿ ಬೆಳೆಗಾರರ ಸಮಾವೇಶಕ್ಕೆ ಇಬ್ಬರು ಕೇಂದ್ರ ಸಚಿವರು ಆಗಮಿಸಿ, ಕಾಫಿ ಬೆಳೆಗಾರರ ಹಲವು ಸಮಸ್ಯೆಗಳನ್ನು ಆಲಿಸಿದ್ದು, ಜಿಲ್ಲೆಯ ಹಲವು ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿರುವುರಿಂದ ಸಮಾವೇಶ ಫಲಪ್ರದವಾಗಿದೆ ಎಂದು ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಹೇಳಿದರು.
ಆಲೂರಿನಲ್ಲಿ ರೈಲು ನಿಲುಗಡೆ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೂ ತಿಳಿಸಿ ರೈಲು ನಿಂತು ಹೊರಡಲಿ ಎಂದು ಗಮನಕ್ಕೆ ತರಬೇಕು ಎಂದುಕೊಂಡಿದ್ದೆವು. ಆದರೆ ಅವರು ಬಾರದ ಕಾರಣ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗಿದೆ. ಕೂಡಲೇ ಸಚಿವರು ನೈರುತ್ಯ ರೈಲ್ವೆ ಇಲಾಖೆ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದು, ಪೂರಕ ಸ್ಪಂದನೆ ಸಿಕ್ಕಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಂಗಳೂರು-ಹಾಸನ ನಡುವೆ ಸಂಚರಿಸುವ ಇಂಟರ್ ಸಿಟಿ ರೈಲು ಗಾಡಿಯನ್ನು ಸಕಲೇಶಪುರದವರೆಗೂ ವಿಸ್ತರಿಸಬೇಕು. ಇದರಿಂದ ಮಲೆನಾಡು ಭಾಗದ ಜನರಿಗೆ ಅನುಕೂಲ ಆಗಲಿದೆ. ಕೂಡಲೇ ರೈಲ್ವೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.
ಟೋಲ್ ಸಂಗ್ರಹಕ್ಕೆ ವಿರೋಧ
ಹಾಸನ-ಬಾಳ್ಳುಪೇಟೆ ನಡುವಿನ ಹೆದ್ದಾರಿ ಕಾಮಗಾರಿ ಸಂಪೂರ್ಣವಾಗಿ ಮುಗಿಯುವವರೆಗೂ ಚೌಲಗೆರೆ ಕೇಂದ್ರದಲ್ಲಿ ಟೋಲ್ ಸಂಗ್ರಹ ಬೇಡ ಎಂದು ಪ್ರತಿಭಟನೆ ನಡೆಸಿದ ನಂತರ ಶುಲ್ಕ ಸಂಗ್ರಹ ಸ್ಥಗಿತ ಮಾಡಲಾಗಿತ್ತು. ಆದರೆ ಸಂಸದರು ಹಾಗೂ ಜಿಲ್ಲಾಧಿಕಾರಿ ತುರ್ತು ಸಭೆ ನಡೆಸಿ ಟೋಲ್‌ನ 20 ಕಿ.ಮೀ. ವ್ಯಾಪ್ತಿಯಲ್ಲಿ ಮುಂದಿನ 3 ತಿಂಗಳ ಆದೇಶದವರೆಗೂ ಟೋಲ್ ವಸೂಲಿ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಆದರೆ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವವರು ಶುಲ್ಕ ಪಾವತಿ ಮಾಡಬೇಕು ಎಂದು ಸೂಚಿಸಿದ್ದಾರೆ. ಇದಕ್ಕೆ ನಮ್ಮ ವಿರೋಧ ಇದೆ. ರಸ್ತೆ ಕಾಮಗಾರಿ ವೈಜ್ಞಾನಿಕ ಮತ್ತು ಅಚ್ಚುಕಟ್ಟು ರೀತಿಯಲ್ಲಿ ಮುಗಿಯುವವರೆಗೂ ಟೋಲ್ ಸಂಗ್ರಹ ಬೇಡ. ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಸಂಘಟನೆಗಳೊಂದಿಗೆ ಮತ್ತೊಮ್ಮೆ ಚರ್ಚಿಸಿ ತೀರ್ಮಾನಿಸಲಾಗುವುದು. ಅಷ್ಟೇ ಅಲ್ಲದೇ ಆಲೂರು, ಪಾಳ್ಯ, ಹೆದ್ದುರ್ಗ ಬಳಿ ಮೇಲ್ಸೇತುವೆ ಅಗತ್ಯವಿದೆ. ಇಲ್ಲವಾದರೆ ಆಗುವ ಅನಾಹುತಗಳಿಗೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಸಿದರು.
ಆಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎನ್.ಮಂಜೇಗೌಡ ಮಾತನಾಡಿ, ಆಲೂರಿನ ಕೋರ್ಟ್ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿಲ್ಲ. ನ್ಯಾಯಾಧೀಶರು ವರ್ಗ ಆದ ನಂತರ ಹೊಸ ನ್ಯಾಯಾಧೀಶರು ಬಾರದ ಕಾರಣ ಕಲಾಪ ಸ್ಥಗಿತಗೊಂಡಿದೆ. ಇದರಿಂದ ಕಕ್ಷಿದಾರರು ಹಾಸನಕ್ಕೆ ಅಲೆಯಬೇಕಾಗಿದ್ದು, ಮಾಹಿತಿ ಪ್ರಕಾರ ಸುಮಾರು 6 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇವೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಜನರಿಗಾಗಿರುವ ತೊಂದರೆ ತಪ್ಪಿಸಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ, ಜಯಪಾಲ್, ನಟರಾಜ್ ಇದ್ದರು.