ಜಿಲ್ಲೆ

ಕಾಫಿ ಬೀಜ ಕದಿಯಲೆತ್ನಿಸಿದವನಿಗೆ ಹಲ್ಲೆ

ಬೇಲೂರು: ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ಳಾವರ ಗ್ರಾಮದಲ್ಲಿ ಗುರುವಾರ ಕಾಫಿ ಕದಿಯಲು ಬಂದು ಸಿಕ್ಕಿ ಬಿದ್ದವನಿಗೆ ಕಾಫಿ ತೋಟದ ಮಾಲೀಕ ಸೇರಿದಂತೆ ಕೆಲವರು ಮನಬಂದಂತೆ ಥಳಿಸಿ ಅಮಾನವೀಯತೆ ಮೆರೆದಿದ್ದು, ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಕಿತ್ತಾವರ ಗ್ರಾಮದ ನಿವಾಸಿ ಮಂಜು ಎಂಬಾತ ಹಲ್ಲೆಗೊಳಗಾದವರು. ಹಲ್ಲೆ ನಡೆಸಿದ ರಾಘವೇಂದ್ರ, ನವೀನರಾಜ್, ಉಮೇಶ, ಸ್ಯಾಮುಯಲ್, ಕೀರ್ತಿ ಅವರನ್ನು ಬಂಧಿಸಲಾಗಿದೆ.
ಘಟನೆ ವಿವರ: ಬೆಳ್ಳಾವರ ಗ್ರಾಮದ ಪಕ್ಕದಲ್ಲಿರುವ ಕಿತ್ತಾವರ ಗ್ರಾಮದ ನಿವಾಸಿ ಮಂಜು ಎಂಬಾತ ಗುರುವಾರ ರಾತ್ರಿ ಕಾಫಿ ಬೀಜ ಕದಿಯಲು ತೋಟಕ್ಕೆ ಹೋಗಿದ್ದ ಎನ್ನಲಾಗಿದೆ. ತೋಟದ ಮಾಲೀಕ ಇತರ ಐವರೊಂದಿಗೆ ಸೇರಿ ಮಂಜುವನ್ನು ಹಿಡಿದು ತೋಟದೊಳಗೆ ಕೈಕಾಲು ಕಟ್ಟಿ ಮನ ಬಂದಂತೆ ಥಳಿಸಿದ್ದಾರೆ. ಅಲ್ಲದೇ, ರಾತ್ರಿ ಇಡೀ ಒಂದೇ ಕಡೆ ಬಿದ್ದು ನರಳುವಂತೆ ಮಾಡಿ ಅಮಾನವೀಯತೆ ಮೆರೆದಿದ್ದಾರೆ. ಪುನಃ ಶುಕ್ರವಾರ ಬೆಳಗ್ಗೆ ಕಾಲಿನ ಬೆರಳಿಗೆ ಹಗ್ಗ ಕಟ್ಟಿ ತೋಟದಲ್ಲಿರುವ ಮರಕ್ಕೆ ಕಟ್ಟಿ ಹಾಕಿದ್ದಲ್ಲದೆ, ತಲೆಯಲ್ಲಿ ರಕ್ತ ಸೋರುವ ರೀತಿ ತಲೆ ಕೆಳಗಾಗಿ ಮರಕ್ಕೆ ಕಟ್ಟಿ ಥಳಿಸಿದ್ದಾರೆ.
ತಾವು ಥಳಿಸುವ, ನಿಂದಿಸುವುದನ್ನು ಸಂಪೂರ್ಣ ವಿಡಿಯೋ ಮಾಡಿದ್ದಾರೆ. ಇದು ಎಲ್ಲೆಡೆ ವೈರಲ್ ಆಗಿದೆ. ತಪ್ಪು ಮಾಡಿದವರ‌್ನು ಹಿಡಿದು ಪೊಲೀಸರಿಗೆ ಒಪ್ಪಿಸಬೇಕು. ಆದರೆ ತಾವೇ ಕಾನೂನು ಕೈಗೆ ತೆಗೆದುಕೊಂಡು ಮೃಗೀಯ ವರ್ತನೆ ತೋರಿದ್ದಾರೆ. ಇನ್ನೊಮ್ಮೆ ತಪ್ಪು ಮಾಡಲ್ಲ, ಬಿಟ್ಟುಬಿಡಿ ಎಂದು ಕ್ಷಮೆ ಕೇಳಿದರೂ ಬಿಡದೆ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಐವರ ವಿರುದ್ಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.