ಸಿದ್ದಾಪುರ: ಕಾಡಿನಿಂದ ಆಹಾರ ಅರಸಿ ಬಂದ ಕಾಡಾನೆಗಳ ಹಿಂಡು ಕಾಫಿ ತೋಟದಲ್ಲೇ ಬೀಡುಬಿಟ್ಟು ಕೃಷಿ ಫಸಲು ನಾಶ ಮಾಡುವ ಮೂಲಕ ಕಾರ್ಮಿಕರು, ಬೆಳೆಗಾರರಲ್ಲಿ ಆತಂಕ ಸೃಷ್ಟಿ ಮಾಡಿ ನಿರ್ಭಯವಾಗಿ ಸುತ್ತಾಡುತ್ತಿವೆ.
ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲಾಪುರ, ತೂಬನ ಕೊಲ್ಲಿ, ಮಠ, ಹುಂಡಿ, ಬಾಡಗ ಬಾಣಂಗಾಲ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಯ್ಯ, ಬೀಟಿಕಾಡು ಸೇರಿದಂತೆ ಹಲವು ಗ್ರಾಮ ವ್ಯಾಪ್ತಿಯ ತೋಟಗಳಲ್ಲಿ 50ಕ್ಕೂ ಹೆಚ್ಚು ಕಾಡಾನೆಗಳು ಬೀಡು ಬಿಟ್ಟಿವೆ.
ಕೆಲವು ದಿನಗಳಿಂದ ಈ ಪ್ರದೇಶಗಳಲ್ಲಿ ಈ ಕಾಡಾನೆಗಳು ಸುತ್ತು ಹೊಡೆಯುತ್ತಿರುವುದರಿಂದ ಈ ಭಾಗದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಾಡಾನೆಗಳ ಭೀತಿಯಿಂದ ಗ್ರಾಮಸ್ಥರು ಮನೆ ಬಿಟ್ಟು ಹೊರಗೆ ಬಾರದಂತಾಗಿದೆ. ಬಾಡಗ ಬಾಣಂಗಾಲ ಕಾಫಿತೋಟದಲ್ಲಿ 17 ಕಾಡಾನೆಗಳು ತೋಟದ ಕೆರೆಯಲ್ಲಿ ನೀರು ಕುಡಿದು ಕಾಫಿ ತೋಟದಲ್ಲೇ ಬೀಡು ಬಿಟ್ಟಿವೆ. ಕಾಡಾನೆ ಗುಂಪಿನಲ್ಲಿ ಮರಿಯಾನೆಗಳು ಇದ್ದು ಕಾಡಾನೆಗಳ ಹಿಂಡಿನಿಂದ ಕಾಫಿಗಿಡಗಳನ್ನು ತುಳಿದು ನಾಶಪಡಿಸುತ್ತಿವೆ. ಅಪಾರ ಪ್ರಮಾಣದಲ್ಲಿ ಬೆಳೆಗಾರರಿಗೆ ಬೆಳೆನಷ್ಟ ಉಂಟಾಗುತ್ತಿದೆ.
ಕಾಡಾನೆಗಳ ಭೀತಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಹಲವರ ಮೇಲೆ ದಾಳಿ ಮಾಡಿದೆ ಘಟನೆಗಳು ನಡೆದಿವೆ. ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟಿದರೂ ಕಾಡಾನೆಗಳು ಮರಳಿ ತೋಟಕ್ಕೆ ಬರುತ್ತಿದ್ದು ತೋಟವನ್ನು ತಮ್ಮ ವಾಸಸ್ಥಳವನ್ನಾಗಿ ಮಾಡಿಕೊಂಡಿವೆ ಎಂದು ಬೆಳೆಗಾರರು, ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಕಾಡಾನೆಗಳ ಹಿಂಡನ್ನು ಅರಣ್ಯ ಇಲಾಖೆ ಕೂಡಲೇ ಕಾಡಿಗಟ್ಟಬೇಕು ಹಾಗೂ ಕಾಡಾನೆಗಳು ಕಾಫಿ ತೋಟಗಳಿಗೆ ಲಗ್ಗೆ ಇಡದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.