ಸಕಲೇಶಪುರ: ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ ಮೊದಲ ದಿನವೇ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಎರಡು ದಿನಗಳ ಹಿಂದೆ ಬೈಕೆರೆ ಗ್ರಾಮದಲ್ಲಿ ಕಾಫಿ ಬೆಳೆಗಾರ ಷಣ್ಮುಖ ಎಂಬುವರನ್ನು ್ನ ಕೊಂದ ನಂತರ ಸೆರೆ ಹಿಡಿಯುವಂತೆ ಒತ್ತಡ ಹೆಚ್ಚಾಗಿತ್ತು. ಅಂದು ನಡೆದ ಪ್ರತಿಭಟನೆ ವೇಳೆ ಸಂಸದ ಶ್ರೇಯಶ್ ಪಟೇಲ್ ಸಲಹೆ ನೀಡಿದ್ದರಿಂದ ಆನೆಜೌಕೂರು ಹಾಗೂ ದುಬಾರೆಯಿಂದ ತಲಾ ಮೂರು ಸಾಕಾನೆಗಳನ್ನು ಬುಧವಾರವೇ ತಾಲೂಕಿನ ಹಾಲೇಬೇಲೂರು ಆನೆಧಾಮಕ್ಕೆ ಕರೆತರಲಾಗಿತ್ತು. ಗುರುವಾರ ಮುಂಜಾನೆ ಡಿಎಫ್‌ಒ ಸೌರಭಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಹಂತಕ ಕಾಡಾನೆ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಸಿಬ್ಬಂದಿ ಗುರುವಾರ ಮುಂಜಾನೆ ತಾಲೂಕಿನ ಹಸಿಡೆ ಗ್ರಾಮ ಸಮೀಪ ಸಂಚರಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ ಹಸಿಡೆ ಹಾಗೂ ಹಲುಸುಲಿಗೆ ಗ್ರಾಮದ ಕಾಫಿ ತೋಟದಲ್ಲಿ ಅಡಗಿದ್ದ ಸುಮಾರು 20 ವರ್ಷದ ಗಂಡಾನೆ ಮೇಲೆ ಅರಿವಳಿಕೆ ತಜ್ಞರಾದ ಮುಜೀಬ್ ಹಾಗೂ ತೌಫಿಕ್ ಅರಿವಳಿಕೆ ಚುಚ್ಚುಮದ್ದು ಹಾರಿಸಿದರು. ಇದರಿಂದ ಬೆದರಿದ ಕಾಡಾನೆ ಕೆಲ ದೂರ ಓಡಿ ಕುಸಿದುಬಿತ್ತು. ತಕ್ಷಣ ಕಾಡಾನೆ ಸುತ್ತುವರಿದ ಅರಣ್ಯ ಇಲಾಖೆ ಸಿಬ್ಬಂದಿ ನೀರು ಹಾಕಿ, ಚೈನು ಹಾಗೂ ಹಗ್ಗದಿಂದ ಬಂಧಿಸಿದರು. ನಂತರ ಎಚ್ಚರಗೊಂಡ ಕಾಡಾನೆಯನ್ನು ರಸ್ತೆಗೆ ಎಳೆದು ತಂದು ಕ್ರೇನ್ ಮೂಲಕ ಲಾರಿಗೆ ಹತ್ತಿಸಿ ಮೈಸೂರಿನ ಮಲೆಮಹದೇಶ್ವರ ಬೆಟ್ಟಕ್ಕೆ ಸಾಗಿಸಿದರು.
ಭೀಮಾ ಸಾಕಾನೆ ನೆರವಿನೊಂದಿಗೆ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲಾಯಿತು. ಕಾರ್ಯಾಚರಣೆಯಲ್ಲಿ ಆಲೂರು, ಬೇಲೂರು, ಸಕಲೇಶಪುರ ಹಾಗೂ ಅರಕಲಗೂಡು ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.