ಸಕಲೇಶಪುರ ಸಮೀಪದ ಉದೇವಾರ ಗ್ರಾಮದಲ್ಲಿ ಹೆಣ್ಣು ಕಾಡಾನೆ ಮೃತಪಟ್ಟಿದೆ. 
ಜಿಲ್ಲೆ

ಕಾಫಿ ತೋಟದಲ್ಲಿ ಹೆಣ್ಣಾನೆ ಸಾವು

ಶಿವಶಂಕರ್ ಎಂ. ಹೆಬ್ಬಳ್ಳ

ಸಕಲೇಶಪುರ: ತಾಲೂಕಿನ ಉದೇವಾರ ಗ್ರಾಮದ ಹೊರವಲಯದ ಕಾಫಿ ತೋಟದಲ್ಲಿ ಗರ್ಭಿಣಿ ಕಾಡಾನೆ ಅನುಮಾನಾಸ್ಪದವಾಗಿ ಮೃತಪಟ್ಟಿದೆ.

ಗ್ರಾಮದ ಬೈರಯ್ಯ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದೆ ಎನ್ನಲಾಗಿದ್ದು, ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಮೃತದೇಹ ಕೊಳೆತು ವಾಸನೆ ಬಂದಾಗ ತೋಟದ ಮಾಲೀಕರು ಸೋಮವಾರ ಸ್ಥಳ ಪರಿಶೀಲನೆ ನಡೆಸಿದ ವೇಳೆ ಕಾಡಾನೆ ಮೃತಪಟ್ಟಿರುವುದು ಕಂಡುಬಂದಿದೆ.

ವಿಷಯ ತಿಳಿದು ಸ್ಥಳಕ್ಕೆ ಆರ್‌ಎಫ್‌ಒ ಶಿಲ್ಪಾ, ಸಹಾಯಕ ಅರಣ್ಯಾಧಿಕಾರಿ ಮೋಹನ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶು ವೈದ್ಯಾಧಿಕಾರಿಗಳ ತಂಡ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಿತು. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿನ ನಿಗೂಢತೆ ತಿಳಿಯಲಿದೆ ಎಂದು ಆರ್‌ಎಫ್‌ಒ ಶಿಲ್ಪಾ ತಿಳಿಸಿದ್ದಾರೆ.