ಗೋವುಗಳ ಕಳೇಬರ ಪತ್ತೆಯಾದ ಸ್ಥಳವನ್ನು ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸ್ವಾಮಿ ಪರಿಶೀಲಿಸಿದರು. ಸತೀಶ್, ಜಗದೀಶ್, ಶ್ರೀಕಾಂತ್, ಬಿರದಾರ, ಜೈಶಂಕರ್ ಇತರರು ಇದ್ದರು. 
ಜಿಲ್ಲೆ

ಕಾಫಿ ತೋಟದಲ್ಲಿ ಗೋವುಗಳ ಕಳೇಬರ ಪತ್ತೆ

Kodagu

ಸುಂಟಿಕೊಪ್ಪ: ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಗರಗಂದೂರು ‘ಬಿ’ ಸಮೀಪದ ಹಾರಂಗಿ ಹಿನ್ನೀರು ಪ್ರದೇಶದ ಬಟಕಲನಹಳ್ಳಿ ಸಮೀಪದ ಕಾಫಿ ತೋಟದಲ್ಲಿ ಎರಡು ದಿನಗಳ ಹಿಂದೆ 2 ಗೋವುಗಳ ಹತ್ಯೆ ನಡೆಸಿ, ಕಳೇಬರವನ್ನು ಮಣ್ಣಿನಲ್ಲಿ ಹೂತು ಹಾಕಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಭಾನುವಾರ ಬೆಳಗ್ಗೆ ಖಚಿತ ಮಾಹಿತಿ ಮೇರೆ ಹಿಂದು ಜಾಗರಣ ವೇದಿಕೆಯ ಹೋಸತೋಟ ಮತ್ತು ಮಾದಾಪುರ ಭಾಗದ ಕಾರ್ಯಕರ್ತರು ಕರೀಂ ಎಂಬುವರ ಪುತ್ರ ಲತೀಫ್ ಎಂಬಾತನ ಕಾಫಿ ತೋಟದಲ್ಲಿ ಜಮಾಯಿಸಿ ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಗೋವುಗಳ ಕಳೇಬರ ಹೂತು ಹಾಕಿರುವುದು ಬೆಳಕಿಗೆ ಬಂದಿದೆ.

ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಸ್ವಾಮಿ, ಮುಖ್ಯಪೇದೆ ಸತೀಶ್, ಪೇದೆಗಳಾದ ಜಗದೀಶ್, ಶ್ರೀಕಾಂತ್, ಬಿರದಾರ ಹಾಗೂ ಜೈಶಂಕರ್ ಪರಿಶೀಲಿಸಿದರು. ಪಶು ವೈದ್ಯರನ್ನು ಕರೆಸಿ ಮಹಜರು ನಡೆಸಲಾಯಿತು.

ಜಿಲ್ಲೆಯಲ್ಲಿ ಗೋವುಗಳ ಹತ್ಯೆ ಪ್ರಕರಣ ಹೆಚ್ಚಾಗುತ್ತಿದ್ದರೂ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಿ ಗೋಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಮಿತಿಯ ಸುನಿಲ್ ಮಾದಾಪುರ, ವಿನುಕುಮಾರ್, ಚಿದು, ಸುನಿಲ್, ರಾಜೇಶ್, ಕುಕ್ಕೇರ ಅಜಿತ್, ಸುಭಾಸ್ ತಿಮ್ಮಯ್ಯ, ರಂಜನ್‌ಗೌಡ ಇತರರು ಇದ್ದರು.