ಜಿಲ್ಲೆ

ಕಾಫಿ ಗಿಡ ಕತ್ತರಿಸಿದ ಅರಣ್ಯ ಇಲಾಖೆ

ಬಾಳೆಹೊನ್ನೂರು: ಖಾಂಡ್ಯ ಹೋಬಳಿ ಗುರುಪರದೇಶಪ್ಪನವರ ಮಠದ ಗ್ರಾಮ ಭದ್ರಾ ಅಭಯಾರಣ್ಯ ಹುಲಿ ಯೋಜನೆಗೆ ಸೇರ್ಪಡೆಗೊಂಡಿರುವ ಹಿನ್ನೆಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಡಿ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ದಿಢೀರ್ ಕೃಷಿ ಜಮೀನು ತೆರವುಗೊಳಿಸಲು ಮುಂದಾದರು. ಇದನ್ನು ವಿರೋಧಿಸಿ ಮೂವರು ವಿಷ ಸೇವಿಸಲು ಯತ್ನಿಸಿದರು.

ಭದ್ರಾ ವನ್ಯಜೀವಿ ವಿಭಾಗದ ಎಸಿಎಫ್ ದಯಾನಂದ ನೇತೃತ್ವದಲ್ಲಿ 100ಕ್ಕೂ ಅಧಿಕ ಫಸಲು ಬರುವ ಕಾಫಿ ಗಿಡಗಳನ್ನು ಯಂತ್ರಗಳ ಮೂಲಕ ಕತ್ತರಿಸಿ ತೆರವು ಮಾಡುತ್ತಿದ್ದರು. ಇದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಲೆಕ್ಕಿಸದೆ ಅಧಿಕಾರಿಗಳು ತೆರವುಗೊಳಿಸಲು ಮುಂದಾದಾಗ ಇಬ್ಬರು ಮಹಿಳೆಯರು ಹಾಗೂ ಯುವಕ ವಿಷ ಸೇವಿಸಲು ಯತ್ನಿಸಿದರು. ತಕ್ಷಣ ಪೊಲೀಸರು ಮೂವರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ವಿಷ ಸೇವಿಸಿಲ್ಲವೆಂದು ವೈದ್ಯರು ದೃಢಪಡಿಸಿದರು.

ಗುರುಪರದೇಶಪ್ಪನವರ ಮಠದ ಗ್ರಾಮದಲ್ಲಿ ವನ್ಯಜೀವಿ ವಿಭಾಗದಲ್ಲಿ 2 ಕುಟುಂಬಕ್ಕೆ ಮಾತ್ರ ಪೂರ್ಣ ಪ್ರಮಾಣದ ಪರಿಹಾರ ನೀಡಿದ್ದು ಸ್ಥಳಾಂತರ ಮಾಡಲು ಆದೇಶ ಮಾಡಿದ್ದರು. ಆದರೆ ಗ್ರಾಮದಲ್ಲಿ 32 ಕುಟುಂಬಗಳು ಇದ್ದು ಎಲ್ಲ ಕುಟುಂಬಗಳಿಗೂ ಸೂಕ್ತ ಪರಿಹಾರ ನೀಡಿ, ಪುನರ್ವಸತಿ ಕಲ್ಪಿಸಬೇಕು. ಹಾಗಾದರೆ ಮಾತ್ರ ಒಟ್ಟಿಗೆ ಗ್ರಾಮವನ್ನು ತೊರೆಯುತ್ತೇವೆ ಎಂದು ಸ್ಥಳೀಯರು ಪಟ್ಟುಹಿಡಿದರು.

ಆತ್ಮಹತ್ಯೆ ಯತ್ನದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿ ಕಾಫಿ ಗಿಡವನ್ನು ಕಡಿಯುವುದನ್ನು ನಿಲ್ಲಿಸಿದರು. ಈ ಸಂದರ್ಭದಲ್ಲಿ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ 4 ದಿನದ ಅವಕಾಶ ನೀಡಿದರು. ಅಷ್ಟರೊಳಗೆ ಜಿಲ್ಲಾಧಿಕಾರಿಯೊಂದಿಗೆ ರ್ಚಚಿಸಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.

ಇತ್ತೀಚೆಗೆ ಜಿಲ್ಲಾಧಿಕಾರಿಯನ್ನು ಗ್ರಾಮಸ್ಥರು ಭೇಟಿ ಮಾಡಿ ಗ್ರಾಮದ 32 ಕುಟುಂಬಗಳಿಗೂ ಪುನರ್ವಸತಿ ಕಲ್ಪಿಸುವಂತೆ ಮನವಿ ಮಾಡಿದ್ದಾಗ ಸ್ಪಂದಿಸಿದ್ದ ಡಿಸಿ, ಎಲ್ಲರಿಗೂ ನ್ಯಾಯ ದೊರಕಿಸಿಕೊಡಲಾಗುವುದು. ತೆರವು ಕಾರ್ಯಾಚರಣೆಯನ್ನು ಕಾಲಮಿತಿ ತೆಗೆದುಕೊಂಡು ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ಬಂದು ತೆರವುಗೊಳಿಸುತ್ತಿರುವುದು ಸರಿಯಲ್ಲ. ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಆ.5ರಂದು ಕಡವಂತಿ ಗ್ರಾಪಂ ಎದುರು ಪರದೇಶಪ್ಪನವರ ಮಠದ ಗ್ರಾಮಸ್ಥರು ಪ್ರತಿಭಟನೆ ನಡೆಸಲಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಕಡವಂತಿ ಗ್ರಾಪಂ ಸದಸ್ಯ ವಿನೋದ್ ಬೊಗಸೆ ಮಾಹಿತಿ ನೀಡಿದರು.