ಜಿಲ್ಲೆ

ಕಾನ್ಕೆರೆ ಗ್ರಾಮದಲ್ಲಿ ಕಾಡಾನೆಗಳ ಹಾವಳಿ

ಬಾಳೆಹೊನ್ನೂರು: ಬಾಳೆಹೊನ್ನೂರು ಅರಣ್ಯ ಇಲಾಖೆ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮುಂದುವರಿದಿದ್ದು, ಜನರು ಆತಂಕಿತರಾಗಿದ್ದಾರೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ಕಾನ್ಕೆರೆ ಗ್ರಾಮದ ಹಲವು ತೋಟಗಳಿಗೆ ಶುಕ್ರವಾರ ರಾತ್ರಿ ವೇಳೆ ಒಂದು ಕಾಡಾನೆ ದಾಳಿ ಮಾಡಿದೆ. ಆನೆ ಪಟ್ಟಣದ ನಿರ್ಮಲಾ ಕಾನ್ವೆಂಟ್ ಹಿಂಭಾಗದ ತೋಟದಲ್ಲಿ ಬೀಡು ಬಿಟ್ಟಿರುವುದನ್ನು ಗ್ರಾಮಸ್ಥರು ಶನಿವಾರ ನೋಡಿದ್ದಾರೆ. ಇದರೊಂದಿಗೆ ಪಟ್ಟಣ ಸಮೀಪದ ಮಕ್ಕಿಮನೆ, ಕಾರ್‌ಗದ್ದೆ, ದೊಡ್ಡಹಡ್ಲು, ಕಣಬೂರು, ಮಾಗೋಡು, ಅಕ್ಷರನಗರ ಭಾಗದಲ್ಲಿಯೂ ಶುಕ್ರವಾರ ರಾತ್ರಿ ಎರಡು ಕಾಡಾನೆಗಳು ರೈತರ ಜಮೀನುಗಳಿಗೆ ದಾಳಿ ಮಾಡಿದ್ದು, ಶನಿವಾರವೂ ಹಲವು ತೋಟಗಳಲ್ಲಿ ಸಂಚರಿಸಿವೆ.

ಎರಡೂ ಕಾಡಾನೆಗಳನ್ನು ಕಂಡು ಗಾಬರಿಗೊಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಕಾಡಿಗೆ ಓಡಿಸಲು ಶನಿವಾರ ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಅಕ್ಷರನಗರ ಗ್ರಾಮದವರೆಗೆ ತೆರಳಿದ ಕಾಡಾನೆಗಳು ವಾಪಸ್ ಕಾರ್‌ಗದ್ದೆಗೆ ಬಂದು ತೋಟವೊಂದರಲ್ಲಿ ಬೀಡುಬಿಟ್ಟಿವೆ.

ಬನ್ನೂರು ಗ್ರಾಪಂ ವ್ಯಾಪ್ತಿಯ ಜಕ್ಕಣಕ್ಕಿ ಹಾಗೂ ಅಣ್ಣಿಗದ್ದೆ ಎಂಬಲ್ಲಿಯೂ ಶುಕ್ರವಾರ ರಾತ್ರಿ ಆನೆಯೊಂದು ತೋಟಗಳಿಗೆ ಬಂದಿದೆ. ಪಟ್ಟಣದ ಸನಿಹಕ್ಕೆ ಕಾಡಾನೆಗಳು ಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕೋರಿದ್ದಾರೆ. ಆನೆ ಓಡಿಸುವ ಕಾರ್ಯಾಚರಣೆ ವೇಳೆಯಲ್ಲಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಜತೆ ಸಹಕರಿಸುವಂತೆ ಕೋರಿದ್ದಾರೆ. ದಿನದಿಂದ ದಿನಕ್ಕೆ ಈ ಭಾಗದಲ್ಲಿ ಕಾಡಾನೆಗಳ ಸಂಚಾರ ಅಧಿಕಗೊಳ್ಳುತ್ತಿರುವುದಕ್ಕೆ ಕೃಷಿಕರು ಹಾಗೂ ಸಾರ್ವಜನಿಕರು ಆತಂಕಗೊಂಡಿದ್ದು ಅರಣ್ಯ ಸಚಿವರು, ಶಾಸಕರು ಗಂಭೀರವಾಗಿ ಪರಿಗಣಿಸಿ ಈ ಭಾಗದಲ್ಲಿರುವ ಎಲ್ಲ ಆನೆಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ.