ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಬೀದರ್ನಲ್ಲಿ ಎಟಿಎಂಗೆ ಹಣ ಸಾಗಿಸುವ ವಾಹನ ತಡೆದು ಗುಂಡಿನ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಹತ್ಯೆಗೈದು ಹಣದೊಂದಿಗೆ ಪರಾರಿಯಾದ ಘಟನೆಯನ್ನು ಸಣ್ಣ ಪ್ರಕರಣವೆಂದು ವ್ಯಾಖ್ಯಾನಿಸಿದ ಕಾರ್ವಿುಕ ಸಚಿವ ಸಂತೋಷ ಲಾಡ್, ಈ ಒಂದು ಘಟನೆಯಿಂದ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳುವುದು ಸರಿಯಲ್ಲ ಎಂದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 7 ಕೋಟಿ ಜನಸಂಖ್ಯೆಯಿರುವ ರಾಜ್ಯದಲ್ಲಿ ಎಲ್ಲ ಸರ್ಕಾರಗಳ ಕಾಲದಲ್ಲಿ ಇಂಥ ಘಟನೆಗಳು ನಡೆದಿವೆ. ಅಮೆರಿಕ, ಲಂಡನ್ಗಳಲ್ಲಿಯೂ ಅಪರಾಧ ಕೃತ್ಯಗಳು ನಡೆಯುತ್ತವೆ. ಬೀದರ್ ಘಟನೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ನನ್ನ ಬಳಿ ಉತ್ತರ ಇಲ್ಲ. ಈ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಸತೀಶ ಜಾರಕಿಹೊಳಿ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ನೀವು (ಮಾಧ್ಯಮ) ಅವರನ್ನೇ ಕೇಳಿ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಯಾರು ಸಿಎಂ ಆಗಬೇಕು, ಯಾರು ಸಿಎಂ ಆಗಬಾರದು ಎಂಬುದು ಹೈಕಮಾಂಡ್ಗೆ ಬಿಟ್ಟ ವಿಚಾರ. ದಲಿತ ಸಿಎಂ ಆಗಬೇಕೋ, ದಲಿತ ಸಿಎಂ ಆಗಬಾರದು ಎಂಬ ವಿಚಾರಕ್ಕೆ ನಾನು ಉತ್ತರ ಕೊಡಲ್ಲ. ಸಿಎಲ್ಪಿ (ಕಾಂಗ್ರೆಸ್ ಶಾಸಕಾಂಗ ಪಕ್ಷ) ಸಭೆಯಲ್ಲಿ ಯಾರ ಪರವಾಗಿ ಕೈ ಎತ್ತುತ್ತೇನೆ ಅಂತ ಅಲ್ಲಿ ಗೊತ್ತಾಗುತ್ತೆ. ನಂತರ ನಾನು ನಿಮಗೆ ತಿಳಿಸುವೆ ಎಂದು ಹೇಳಿದರು.