ಜಿಲ್ಲೆ

ಕಾನೂನು ಸುವ್ಯವಸ್ಥೆ ಗಟ್ಟಿಯಾಗಲಿ ; ಪ್ರಗತಿಪರ ಮಹಿಳಾ ಸಂಘಟನೆಗಳ ಪ್ರತಿಭಟನೆ

ಕೋಲಾರ: ಉತ್ತರಪ್ರದೇಶದ ಹಾಥರಸ್ ನಗರದಲ್ಲಿ 19 ವರ್ಷದ ಯುವತಿ ಮೇಲೆ ದೌರ್ಜನ್ಯ ಮಾಡಿರುವುದನ್ನು ಖಂಡಿಸಿ ಪ್ರಗತಿಪರ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ನಗರದ ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ತಾಲೂಕು ಕಚೇರಿ ಎದುರು ಬುಧವಾರ ಮೌನ ಪ್ರತಿಭಟನೆ ನಡೆಸಲಾಯಿತು.

ಒಕ್ಕೂಟದ ಮುಖಂಡರಾದ ಶಾಂತಮ್ಮ ಮಾತನಾಡಿ, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ ದಿನೇ ದಿನೆ ಹೆಚ್ಚುತ್ತಿದೆ. ಹಾಥರಸ್ ಪ್ರಕರಣವನ್ನು ಇಡೀ ದೇಶವೇ ಖಂಡಿಸುತ್ತಿದೆ. ಹೆಣ್ಣು ಮಕ್ಕಳು ನಿರ್ಭಯವಾಗಿ ಓಡಾಡುವ ವಾತಾವರಣ ನಿರ್ಮಾಣ ಮಾಡಲು ಸರ್ಕಾರಗಳು ಕಾನೂನು ಸುವ್ಯವಸ್ಥೆ ಗಟ್ಟಿ ಮಾಡಿ ಮಹಿಳಾ ಪರ ಕಾನೂನು ಕಾಯ್ದೆ ಬಲಗೊಳಿಸಿ ಮಹಿಳೆಯರಿಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳ ಮನವಿಯನ್ನು ಉಪ ತಹಸೀಲ್ದಾರ್ ಸುಜಾತಾಗೆ ಸಲ್ಲಿಸಲಾಯಿತು. ಪ್ರಗತಿ ಪರ ಮಹಿಳಾ ಸಂಘಟನೆಗಳ ಮುಖಂಡರಾದ ಗೌರಿ, ಪುಷ್ಪಲತಾ, ಹೂಹಳ್ಳಿ ನಾಗರಾಜ್, ಶಿಲ್ಪಾ, ಅಶ್ವಿನ್ ರಾಜನ್, ಶಶಿಕುಮಾರ್, ಲಕ್ಷ್ಮೀದೇವಿ, ರುದ್ರೇಶ್ ಹುಣಶಿಯಾಲ್, ಸಂಧ್ಯಾ, ಚಿನ್ನಮ್ಮ, ರೂಪಾ ಇತರರು ಭಾಗವಹಿಸಿದ್ದರು.