ಜಿಲ್ಲೆ

ಕಾನೂನು ಸುವ್ಯವಸ್ಥೆ ಕಾಪಾಡಿ

ಸಾರ್ವಜನಿಕರಿಗೆ ಅಮೃತೂರು ವೃತ್ತ ನಿರೀಕ್ಷಕ ಮಾಧ್ಯನಾಯಕ್​ ಮನವಿ

ಹುಲಿಯೂರುದುರ್ಗ: ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಪೊಲೀಸ್​ಇಲಾಖೆ ಯೊಂದಿಗೆ ಸಾರ್ವಜನಿಕರು ಸಹಕರಿಸಿದರೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಬಹುದು ಎಂದು ಅಮೃತೂರು ವೃತ್ತ ನಿರೀಕ್ಷಕ ಮಾಧ್ಯನಾಯಕ್​ ತಿಳಿಸಿದರು.

ಕುಣಿಗಲ್​ ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಪೊಲೀಸ್​ ಇಲಾಖೆಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಹುಲಿಯೂರುದುರ್ಗ ಠಾಣೆ ವ್ಯಾಪ್ತಿಯಲ್ಲಿ 159 ಹಳ್ಳಿಗಳು ಬರಲಿದ್ದು, ನಮ್ಮ ವ್ಯಾಪ್ತಿಯಲ್ಲಿ ಒಟ್ಟು 1 ಲಕ್ಷ ಜನಸಂಖ್ಯೆ ಇರುವ ಠಾಣೆಯಲ್ಲಿ ಪ್ರಸ್ತುತ 35 ಸಿಬ್ಬಂದಿ ವರ್ಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಠಾಣೆಗೆ ಸಿಬ್ಬಂದಿ ಕೊರತೆಯ ನಡುವೆ ಅಪರಾಧ ಪ್ರಕರಣ ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ ಹಾಗಾಗಿ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಾತನಾಡಿದ ಸಾರ್ವಜನಿಕರು, ಹುಲಿಯೂರುದುರ್ಗ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರಾತ್ರಿವೇಳೆ ಡ್ರಗ್​, ಮದ್ಯ, ವೈಟ್ನರ್​ ಸೇವನೆ ಮಾಡುತ್ತಿರುವುದು ಕಂಡುಬಂದಿದೆ. ಕಾಲೇಜು ಮಕ್ಕಳು ಇದರಿಂದ ನಶೆಯಲ್ಲಿ ತೆಲುತ್ತಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಪಟ್ಟಣದಲ್ಲಿ ಬೈಕ್​ ವೀಲಿಂಗ್​ ಮಾಡುತ್ತಿದ್ದು, ಅಡ್ಡದಿಡ್ಡಿಯಾಗಿ ಒಡಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ಗ್ರಾಪಂ ಸದಸ್ಯ ನಟರಾಜ್​ ಮಾತನಾಡಿ, ಪೊಲೀಸರ ವಸತಿ ಗೃಹ ತೆರವುಗೊಳಿಸಿ ಹಲವು ವರ್ಷ ಕಳೆದರೂ ವಸತಿ ಗೃಹ ನಿಮಾರ್ಣ ಮಾಡಿಲ್ಲ. ಇಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸಮಸ್ಯೆಯಾಗಿದೆ. ಹುಲಿಯೂರುದುರ್ಗ ಪಟ್ಟಣದಲ್ಲಿ ಸಿಸಿ ಕ್ಯಾಮಾರ ಅಳವಡಿಸಬೇಕು. ಈ ಭಾಗದ ಕ್ರಷರ್​ಗಳಲ್ಲಿ

ಜಲ್ಲಿ ಎಂ ಸ್ಯಾಂಡ್​ ತುಂಬಿ ಸಾಗುವ ಟಿಪ್ಪರ್​ ಲಾರಿಗಳಿಗೆ ನಂಬರ್​ ಪ್ಲೇಟ್​ ಇಲ್ಲದೆ ನಿಯಮ ಮೀರಿ ಸಾಗಿಸುತ್ತಿದ್ದಾರೆ. ಮದ್ಯ ಅಕ್ರಮ ಮಾರಾಟ ಹೆಚ್ಚುತ್ತಿದ್ದು, ಬಾರ್​ ಮಾಲೀಕರಿಂದ ನೇರವಾಗಿ ಪೆಟ್ಟಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವುದು ಸೇರಿ ವಿವಿಧ ಸಮಸ್ಯೆಗಳನ್ನು ಮಂಡಿಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಕುಣಿಗಲ್​ ಉಪ ವಿಭಾಗದ ಡಿವೈಎಸ್​ಪಿ ಓಂಪ್ರಕಾಶ್​ ಮಾತನಾಡಿ, ಜನಸ್ನೇಹಿಪೊಲೀಸ್​ ವ್ಯವಸ್ಥೆ ಜಾರಿಯಲ್ಲಿದ್ದು, ನಾಗರಿಕರ ಸೇವೆಯೇ ನಮ್ಮ ಗುರಿಯಾಗಿದೆ.ಯಾವುದೇಸಮಸ್ಯೆ ಇದ್ದಲ್ಲಿ ಸ್ಥಳಿಯ ಠಾಣೆ ಅಥವಾ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದರು. ಸಭೆಯಲ್ಲಿ ಕೇಳಿ ಬಂದಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗೂವುದು. ಅಮೃತೂರು ವೃತ್ತ ನಿರೀಕ್ಷಕ ಕಚೇರಿಯನ್ನು ಸ್ಥಳಾಂತರಿಸುವಂತೆ ಸಾರ್ವಜನಿಕರಿಂದ ಕೇಳಿ ಬಂದಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.