ಜಿಲ್ಲೆ

ಕಾನೂನು ಸಲಹೆ ಪಡೆದು ಮತ ಎಣಿಕೆ

ಧಾರವಾಡ: ಧಾರವಾಡ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿ ಮುಗಿದ ಹಿನ್ನೆಲೆಯಲ್ಲಿ ಶನಿವಾರ ಮತದಾನ ಪ್ರಕ್ರಿಯೆ ನಡೆಯಿತು. ಆದರೆ, ಚುನಾವಣಾಧಿಕಾರಿಯಾಗಿರುವ ತಹಸೀಲ್ದಾರ್ ಡಾ. ಸಂತೋಷಕುಮಾರ ಬಿರಾದಾರ ಅವರು, ಹೈಕೋರ್ಟ್​ನಿಂದ ಕಾನೂನು ಸಲಹೆ ಪಡೆದು ಮತ ಎಣಿಕೆಯನ್ನು ಸೋಮವಾರಕ್ಕೆ ಮುಂದೂಡಿದರು.

ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, ಶ್ರೀ ಮೃತ್ಯುಂಜಯ ಹತ್ತಿ ಸಂಸ್ಕರಣ ಸಂಘ ನಿಯಮಿತದ ಪ್ರತಿನಿಧಿಯಾಗಿ ಎಪಿಎಂಸಿ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ. ಆದರೆ ಸಂಘದ ನವೀಕರಣವಾಗದ ಕಾರಣ ಎಪಿಎಂಸಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಮತ ಚಲಾವಣೆ ಮಾಡದಂತೆ ಎಪಿಎಂಸಿ ಕಾರ್ಯದರ್ಶಿ ಆದೇಶಿಸಿದ್ದರು. ಸಂಘದ ಮರು ನೋಂದಣಿ ಮಾಡಿಸಿ ಕಾನೂನುಬದ್ಧವಾಗಿ ಮತದಾನದ ಹಕ್ಕು ನೀಡುವಂತೆ ಕಾಂಗ್ರೆಸ್ ಮುಖಂಡ ಚಿಂಚೋರೆ ಹೈಕೋರ್ಟ್ ಮೆಟ್ಟಲೇರಿದ್ದರು. ಜು. 2ರಂದು ಆದೇಶ ಹೊರಡಿಸಿದ್ದ ಹೈಕೋರ್ಟ್, ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಆದೇಶಿಸಿತ್ತು. ಅದರಂತೆ ಚಿಂಚೋರೆ, ಶನಿವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಆದರೆ, ಹೈಕೋರ್ಟ್​ನಿಂದ ಕಾನೂನು ಸಲಹೆ ಪಡೆದು ಮತ ಎಣಿಕೆ ನಡೆಸಿ ಫಲಿತಾಂಶ ಪ್ರಕಟಿಸುವುದಾಗಿ ಚುನಾವಣಾಧಿಕಾರಿ ಡಾ. ಸಂತೋಷಕುಮಾರ ಬಿರಾದಾರ ನಿರ್ಧರಿಸಿದರು. ಹೀಗಾಗಿ ಮತಪೆಟ್ಟಿಗೆಗಳನ್ನು ಸೀಲ್ ಮಾಡಿ ಪೊಲೀಸ್ ಬಂದೋಬಸ್ತ್​ನಲ್ಲಿ ಖಜಾನೆ ಕಚೇರಿಗೆ ರವಾನಿಸಲಾಯಿತು.

ಕಾಂಗ್ರೆಸ್ ಬೆಂಬಲಿತರ ಅಧಿಕಾರ

16 ಸದಸ್ಯ ಬಲದ ಧಾರವಾಡ ಎಪಿಎಂಸಿಯಲ್ಲಿ ಕಾಂಗ್ರೆಸ್ ಬೆಂಬಲಿತರ ಅಧಿಕಾರವಿದೆ. ಹಾಲಿ ಅಧ್ಯಕ್ಷರಾಗಿರುವ ಮಹಾವೀರ ಜೈನ ಅವರ 20 ತಿಂಗಳ ಅಧಿಕಾರ ಅವಧಿ ಜು. 5ಕ್ಕೆ ಮುಕ್ತಾಯಗೊಂಡಿದೆ. ಎಪಿಎಂಸಿಯಲ್ಲಿ ಕಾಂಗ್ರೆಸ್ ಬೆಂಬಲಿತ 7, ಬಿಜೆಪಿ ಬೆಂಬಲಿತ 6 ಹಾಗೂ ಮೂವರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಪ್ರಸ್ತುತ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ಮಹಾವೀರ ಜೈನ, ಬಿಜೆಪಿಯಿಂದ ಬಸಪ್ಪ ಹೊಸೂರ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್​ನಿಂದ ಬಸವ್ವ ಶಿರಕೋಳ ಹಾಗೂ ಬಿಜೆಪಿಯಿಂದ ಕೃಷ್ಣಾ ಕೊಳ್ಳಾನಟ್ಟಿ ಸ್ಪರ್ಧಿಸಿದ್ದಾರೆ. ಇಬ್ಬರು ಬಿಜೆಪಿ ಬೆಂಬಲಿತರು ಕಾಂಗ್ರೆಸ್​ನತ್ತ ವಾಲಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಇದೆ.