ಜಿಲ್ಲೆ

ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ: ಎಎಸ್ ಪಿ ವೆಂಕಟೇಶ್ ನಾಯ್ಡು ಎಚ್ಚರಿಕೆ

ಹಾಸನ: ಮದ್ಯ ಮತ್ತು ಮಾದಕ ವಸ್ತುಗಳನ್ನು ಯುವಕರು ಹಾಗೂ ಹಿರಿಯರು ಬಳಸುವುದರಿಂದ ಸಮಾಜ ಹಾಳಾಗುವುದಲ್ಲದೇ ದಶ್ಚಟಕ್ಕೆ ಒಳಗಾದ ವ್ಯಕ್ತಿಯ ಕುಟುಂಬವು ನೆಮ್ಮದಿಯಿಂದ ಇರುವುದಿಲ್ಲ. ಮಾದಕ ವಸ್ತುಗಳಂತಹ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಎಚ್ಚರಿಸಿದರು.

ನಗರದ ಡೈರಿ ವೃತ್ತದ ಬಳಿ ಇರುವ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸರ್ಕಾರಿ ಇಂಜಿನಿಯರ್ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಹಮ್ಮಿಕೊಳ್ಳಲಾಗಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪಾಟಿಣಾಮ ಕುರಿತು ವಿಚಾರ ಸಂಕೀರಣವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತೂತದಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಹೆಚ್ಚಿನ ಬಳಕೆಯಿಂದ ಸಮಾಜ ಯಾವ ರೀತಿ ಬೆಳೆಯುತ್ತಿದೆ ಹಾಗೂ ಸಮಾಜ ಯಾವ ಕಡೆ ಹೋಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಡ್ರಗ್ ಅಡಿಟ್ ಆದವನು ಹಣಕ್ಕಾಗಿ ಮನೆ ಒಡವೆಯನ್ನೆ ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಆ ಕುಟುಂಬದಲ್ಲಿ ಯಾವ ನೆಮ್ಮದಿ ಇರುವುದಿಲ್ಲ. ನಗರದ ವಿವಿಧ ಭಾಗಗಳಲ್ಲಿ ಗಾಂಜಾಗವನ್ನು ಮಾರಾಟ ಮಾಡುತ್ತಿದ್ದು, ಇದರಿಂದಲೇ ಯುವ ಜನಾಂಗ ಇಂತಹ ಕೆಟ್ಟ ಚಟಗಳಿಗೆ ಒಳಗಾಗಿ ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರವ್ಯಕ್ತಪಡಿಸಿದರು.

ಇಂತಹ ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ಶಿಕ್ಷೆ ಕಟಿಟ್ಟ ಬುತ್ತಿ. ಗಾಂಜಾಕ್ಕೆ ಒಳಪಡುವ ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಿರುವುದು ಕಂಡು ಬಂದರೇ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.

ದುಷ್ಟರ ಸಹವಾಸದಿಂದ ಕುಡಿತ, ಮಾದಕ ವ್ಯಸನ ಹಾಗೂ ಹಲವಾರು ಕೆಟ್ಟ ಚಟಗಳಿಗೆ ಇವತ್ತಿನ ಪೀಳಿಗೆ ಬಲಿಯಾಗುತ್ತಿರುವುದರಿಂದ ಹಲವಾರು ಕುಟುಂಬಗಳು ಬೀದಿ ಪಾಲಾಗುತ್ತಿದೆ. ಮದ್ಯಪಾನ, ಮಾದಕ ವ್ಯಸನಗಳ ದುಷ್ಚಟಗಳಿಗೆ ಬಲಿಯಾಗದೇ ಯುವ ಜನತೆ ತಮ್ಮ ಕುಟುಂಬ ಜೊತೆ ಆರೋಗ್ಯಕರ ಜೀವನವನ್ನು ನಡೆಸಬೇಕು. ತಂಬಾಕು ಸೇವನೆ ಧೂಮಪಾನ ಸೇವನೆಯಿಂದ ನಮ್ಮ ಆರೋಗ್ಯವನ್ನು ನಾವೇ ಹಾಳು ಮಾಡಿಕೊಳ್ಳುತ್ತಿದ್ದೆವೆ ಎಂದರು. ಬೇರೆ ರಾಷ್ಟಗಳಲ್ಲಿ ಉತ್ಪಾದನೆ ಮಾಡುವ ಅನೇಕ ಹೆಸರಿನ ಬ್ರಾಂಡ್‌ಗಳ ಮದ್ಯ ಮತ್ತು ಮಾದಕ ವಸ್ತುಗಳನ್ನು ನಮ್ಮ ದೇಶದ ಜನರು ಸೇವಿಸಿ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಶೋಚನೀಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಗಿರೀಶ್, ಹಾಸನಾಂಬ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮನೋ ವೈದ್ಯರಾದ ಡಾ|| ಪುನೀತ್, ವಾರ್ತಾ ಮತ್ತು ಸಾರ್ವಜಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮೀನಾಕ್ಷಮ್ಮ ಇತರರು ಉಪಸ್ಥಿತರಿದ್ದರು.