ಪಿರಿಯಾಪಟ್ಟಣ: ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಯ ವ್ಯವಸ್ಥಾಪಕರು, ಅಧ್ಯಕ್ಷ ಮತ್ತು ನಿರ್ದೇಶಕರ ಆಯ್ಕೆಗೆ ಚುನಾವಣೆ ನಿಗದಿಯಾದ ಮೇಲೆ ಕ್ಷೇತ್ರ ಮೀಸಲಾತಿಯನ್ನು ಕಾನೂನು ಬಾಹಿರವಾಗಿ ಬದಲಾಯಿಸಿದ್ದಾರೆ ಎಂದು ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬಸವರಾಜೇ ಅರಸ್ ಆರೋಪಿಸಿದರು.
ಈ ಹಿಂದೆ ನಡೆದ ವಾರ್ಷಿಕ ಸಭೆಯಲ್ಲಿ ನಿರ್ದೇಶಕರ 13 ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿ ಸರ್ವಾನುಮತದಿಂದ ಒಪ್ಪಿಗೆ ಪಡೆಯಲಾಗಿತ್ತು. ಫೆಬ್ರವರಿ 9ರಂದು ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು ಇತ್ತೀಚೆಗೆ ಅಧ್ಯಕ್ಷ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಆಡಳಿತ ಮಂಡಳಿ ತುರ್ತು ಸಭೆ ಕರೆದು ಕ್ಷೇತ್ರ ವಿಂಗಡಣೆಯಲ್ಲಿ ದುರುದ್ದೇಶ ಪೂರ್ವಕವಾಗಿ ಮೀಸಲಾತಿ ಬದಲಾವಣೆ ಮಾಡಿದ್ದಾರೆ. ಇದು ಕಾನೂನು ಉಲ್ಲಂಘನೆಯಾಗಿದೆ. ಸಭೆಯಲ್ಲಿ ಹಾಜರಿದ್ದ 7 ನಿರ್ದೇಶಕರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ ಗಮನ ನೀಡಲಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ನನಗೆ ಕಾಂಗ್ರೆಸ್ ಪಕ್ಷದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದರೆ ಕ್ಷೇತ್ರ ಮೀಸಲಾತಿ ಬದಲಾವಣೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ಪಕ್ಷದವರು ಆಮಿಷ ಒಡ್ದುತ್ತಿದ್ದಾರೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ರಾಮು ಮಾತನಾಡಿ, ಸಹಕಾರ ಸಂಘಗಳ ಚುನಾವಣೆಗಳಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರು ಗೆಲುವು ಸಾಧಿಸಬಾರದು ಎಂಬ ದುರುದ್ದೇಶದಿಂದ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ತಿಮ್ಮನಾಯಕ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಗಿರೀಶ್, ಮುಖಂಡರಾದ ರಾಜು, ಸಿ.ಎನ್.ರವಿ, ಕುಮಾರ್, ವಿದ್ಯಾ ಶಂಕರ್, ಎ.ಟಿ.ರಂಗಸ್ವಾಮಿ ಹಾಜರಿದ್ದರು.