ಜಿಲ್ಲೆ

ಕಾನೂನು ಬಾಹಿರ ಸಂಗತಿಗಳ ಕಡೆ ಬೇಡ ಗಮನ

ಡಿ.ಪಿ.ನಾಗರಾಜ ಶ್ರೇಷ್ಠಿ

ಚಿತ್ರದುರ್ಗ: ಹದಿ ಹರೆಯದ ವಯಸ್ಸಿನಲ್ಲಿ ವ್ಯಸನಗಳಿಗೆ ಸಿಲುಕಿ ಕಾನೂನು ಸಂಘರ್ಷಕ್ಕೆ ಒಳಗಾಗುವಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಜಿಲ್ಲಾ ಕಾನೂನ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಧೀಶ ಎಂ. ವಿಜಯ್ ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಯುವಜನ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ರಾಷ್ಟ್ರೀಯ ಸೇವಾ ಯೋಜನೆ ಇವುಗಳ ಸಹಯೋಗದಲ್ಲಿ ಮಂಗಳವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಯುವ ದಿನಾಚರಣೆ, ಕಾನೂನು ಅರಿವು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಯುವಕರು ಕಾನೂನು ಬಾಹಿರ ಸಂಗತಿಗಳ ಕಡೆ ಗಮನ ಕೊಡದೆ ವಿದ್ಯಾಭ್ಯಾಸದ ಕಡಕೆಗೆ ಹೆಚ್ಚಿನ ಒಲವು ತೋರಬೇಕು.

ದೇಶದ ಜನಸಂಖ್ಯೆಯ ಶೇ.29 ರಷ್ಟು ಯುವಜನರಿದ್ದಾರೆ. ದೇಶದ ಅಭಿವೃದ್ಧಿ ಯುವಕರ ಮೇಲೆ ನಿಂತಿದೆ. ಆದ್ದರಿಂದ ಅವರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳಸಬೇಕೆಂಬುದು ಸ್ವಾಮಿ ವಿವೇಕಾನಂದರ ಆಶಯವಾಗಿತ್ತು ಎಂದು ತಿಳಿಸಿದರು.

ವಿವೇಕಾನಂದರ ಜೀವನ ಯುವ ಜನರಿಗೆ ಮಾದರಿ ಹಾಗೂ ಸ್ಫೂತಿರ್ರ್ಯಾಗಿದೆ. ಯುವ ದಿನಾಚರಣೆ ಘೋಷವಾಕ್ಯ ಯುವಜನರ ಶಕ್ತಿ ಸಂಭ್ರಮಿಸೋಣ ಎನ್ನುವುದಾಗಿದೆ. ಯುವಜನರ ಶಕ್ತಿ ಸದ್ಭಳಕೆಯಾದರೆ ಕುಟುಂಬ, ನಾಡು, ದೇಶ ಸಮೃದ್ಧಿಯಾಗಲಿದೆ ಎಂದರು.

ಪೋಕ್ಸೋ, ಬಾಲ್ಯವಿವಾಹ ನಿಷೇಧ ಕಾಯ್ದೆ, ಎನ್‌ಡಿಪಿಎಸ್, ಸೈಬರ್ ಅಪರಾಧ ಹಾಗೂ ಅಪಘಾತಗಳಲ್ಲಿ ಯುವಕರು ಹೆಚ್ಚಿನ ತೊಂದರೆಗೆ ಸಿಲುಕುತ್ತಿದ್ದಾರೆ. ಇಂಥವರ ಪಾಲಕರು ಅಸಹಾಯಕರಾಗಿ ಕುಳಿತುಕೊಳ್ಳವಂತಾಗಿದೆ. ವಿದ್ಯಾರ್ಥಿಗಳು ಓದಿನ ಜತೆ ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿರುವುದು ಅವಮಾನಕರ ಸಂಗತಿ. ಈ ಹಿನ್ನಲೆಯಲ್ಲಿ ಪ್ರಾಧಿಕಾರ ಪೋಕ್ಸೋ,ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಎಂದು ವಿಜಯ್ ಹೇಳಿದರು.

ಜಿಲ್ಲಾ ಯುವಜನ ಅಧಿಕಾರಿ ಎನ್. ಸುಹಾಸ್ ಮಾತನಾಡಿ, ಶ್ರೇಷ್ಠ ಆಧ್ಯಾತ್ಮಿಕ ನಾಯಕ, ತತ್ವಜ್ಞಾನಿ ಸ್ವಾಮಿ ವಿವೇಕಾನಂದರ ಜನ್ಮ ದಿನ ಜ.12 ನ್ನು ರಾಷ್ಟ್ರೀಯ ಯುವದಿನವಾಗಿ ಆಚರಿಸಲಾಗುತ್ತಿದೆ ಎಂದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಓದುವಾಗಲೇ ವೃತ್ತಿ ಕೌಶಲಗಳನ್ನು ಬೆಳಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಎಐ ಹಾಗೂ ಆಟೋಮೇಷನ್ ಲರ್ನಿಂಗ್ ಪ್ರವರ್ಧಮಾನಕ್ಕೆ ಬರಲಿದೆ. ಇದರಲ್ಲಿ ಹೆಚ್ಚಿನ ಕೌಶಲಗಳಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ವೈ. ತಿಪ್ಪೇಸ್ವಾಮಿ, ವ್ಯಕ್ತಿತ್ವ ವಿಕಸನ ತರಬೇತಿದಾರ ಗಜೇಂದ್ರ ಎಂ. ನಾಯ್ಕ ಮಾತನಾಡಿದರು. ಪ್ರಾಂಶುಪಾಲ ಆರ್. ರಾಘವೇಂದ್ರಚಾರ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಮೇಶ್ ಮತ್ತಿತರರು ಇದ್ದರು.