ಮೈಸೂರು: ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡವರು ಕಾನೂನು ತಜ್ಞರು ಹಾಗೂ ವಿದ್ವಾಂಸರ ಪುಸ್ತಕಗಳನ್ನು ಓದುವುದು ಅಗತ್ಯ ಎಂದು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಜಿ.ಆರ್.ಸ್ವಾಮಿನಾಥನ್ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಕಾನೂನು ಕಾಲೇಜಿನ ಆವರಣದಲ್ಲಿ ಇತ್ತೀಚೆಗೆೆ ಆಯೋಜಿಸಿದ್ದ ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆ-2002ರ ಕುರಿತು ವಿಶೇಷ ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನೂನು ವೃತ್ತಿಯಲ್ಲಿ ಇರುವವರು ಹೊಸ ಕಾನೂನುಗಳ ಬಗ್ಗೆ ಅಧ್ಯಯನ ಹಾಗೂ ಕಾನೂನು ತಜ್ಞರ ಅಭಿಪ್ರಾಯ ಹಾಗೂ ಪುಸ್ತಕಗಳನ್ನು ಓದಿ ತಿಳಿದುಕೊಂಡು ವಾದವನ್ನು ಮಂಡಿಸುವುದು ಪ್ರಸ್ತುತ ದಿನಗಳಲ್ಲಿ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಕಾನೂನುಬಾಹಿರವಾಗಿ ಸಂಪಾದಿಸಿದ ಹಣವನ್ನು ಔಪಚಾರಿಕ ಆರ್ಥಿಕತೆಗೆ ಸೇರಿಸುವ ಪ್ರಯತ್ನ ಸಮಾಜದಲ್ಲಿ ನಡೆಯುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಹಣವನ್ನು ಸಂಪಾದಿಸುವುದು ಜೀವನದ ನಿರ್ವಹಣೆಗೆ ಹೊರತು ಐಷಾರಾಮಿ ಜೀವನ ನಡೆಸುವುದಕ್ಕಲ್ಲ. ಈ ವಿಚಾರವನ್ನು ನಾವೆಲ್ಲರೂ ಕಾನೂನಿನ ಮೂಲಕ ತಡೆಗಟ್ಟಬೇಕಿದೆ.
ಪ್ರಸ್ತುತ ದಿನಗಳಲ್ಲಿ ದೊಡ್ಡ ರಾಜಕಾರಣಿಗಳು ಹಾಗೂ ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಹಣದ ಮೋಹಕ್ಕೆ ಬಿದ್ದು, ಹಣವನ್ನು ಅಕ್ರಮವಾಗಿ ಸಂಪಾದಿಸಿ ಸಿಕ್ಕಿ ಬೀಳುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ ಎಂದರು.
ಕಾನೂನು ಎಲ್ಲರನ್ನು ಗೌರವಿಸುತ್ತದೆ. ಕಾನೂನಿನ ಮುಂದೆ ಎಂತಹ ದೊಡ್ಡ ವ್ಯಕ್ತಿಯಾಗಲಿ, ಯಾರೇ ಆಗಲಿ ತಲೆಬಾಗಬೇಕು. ಕಾನೂನಿನ ವಿಷಯವನ್ನು ನಿಜವಾಗಿ ಅರ್ಥ ಮಾಡಿಕೊಳ್ಳಲು ಹಾಗೂ ಬೇರೆಯವರಿಗೆ ಅರ್ಥೈಸಲು ಕಾನೂನಿನ ಐತಿಹಾಸಿಕ ಹಿನ್ನೆಲೆಯನ್ನು ಅರಿತಿರಬೇಕೆಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಹಣ ಅಕ್ರಮ ವರ್ಗಾವಣೆ ಕಾಯ್ದೆ-2005ರ ಜುಲೈ 5ರಲ್ಲಿ ಜಾರಿಗೆ ಬಂತು. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳ ಮೂಲಕ ಅನುಮಾನಾಸ್ಪದವಾದ ಕಕ್ಷಿದಾರರ ದಾಖಲೆಗಳನ್ನು ಪರಿಶೀಲಿಸಿ, ಹಣಕಾಸು ತನಿಖಾ ವಿಭಾಗ ಭಾರತ (ಎಫ್‌ಐಯು) ಅಧಿನಿಯಮದ ಮೂಲಕ ಶಿಕ್ಷಾರ್ಹ ತಪ್ಪಿಸ್ಥರಿಗೆ ಶಿಕ್ಷೆ ನೀಡುವ ಹಾಗೂ ಅಪರಾಧಕ್ಕೆ ಸಂಬಂಧಿಸಿದಂತೆ ಅವರ ಆಸ್ತಿಯನ್ನು ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿನಿಯಮದಲ್ಲಿ ಸಮ್ಮತಿ ಇದೆ ಎಂದು ತಿಳಿಸಿದರು.
ಅಕ್ರಮ ಹಣಕಾಸು ವ್ಯವಹಾರ ಮಾಡಿದವರಿಗೆ ಕಾನೂನಿನಲ್ಲಿ 3 ರಿಂದ 7 ವರ್ಷದವರೆಗೆ ಜೈಲುವಾಸ ಹಾಗೂ ದಂಡ ವಿಧಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಹೇಳಿದರು.
ಪ್ರಾಂಶುಪಾಲೆ ಡಾ. ಎನ್.ವಾಣಿ, ಮುಖ್ಯ ಕಾರ್ಯನಿರ್ವಾಹಕ ಪ್ರೊ.ಕೆ.ಎಸ್.ಸುರೇಶ್, ಸಹಾಯಕ ಪ್ರಾಧ್ಯಾಪಕ, ನೀತಿ ಸಮಿತಿಯ ಸಂಯೋಜಕ ಪ್ರಣವ್ ಕುಮಾರ್ ನಾಯಕ್, ಆಶ್ರಯ್ ಎಸ್, ಚಕ್ರಬೋರ್ತಿ ಉಪಸ್ಥಿತರಿದ್ದರು.