ಚಿಕ್ಕಮಗಳೂರಿನ ಸಹಾಯಕ ಔಷಧ ನಿಯಂತ್ರಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ೧೭೯ ನೇ ಸ್ವಾತಂತ್ರ್ಯ ದಿನಾಚರಣೆಯನ್ನುದ್ದೇಶಿಸಿ ಸಹಾಯಕ ಔಷಧ ನಿಯಂತ್ರಕ ಡಾ.ವೀರೇಶ್ ಬಾಬು ಮಾತನಾಡಿದರು. 
ಜಿಲ್ಲೆ

ಕಾನೂನು ಚೌಕಟ್ಟಿನಲ್ಲಿ ಬದುಕಿ ಸದೃಢ ದೇಶ ಕಟ್ಟೋಣ

ಚಿಕ್ಕಮಗಳೂರು: ಸಮಸ್ತ ದೇಶವಾಸಿಗಳು ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಕಾನೂನಿನ ಚೌಕಟ್ಟಿನೊಳಗೆ ಬದುಕುವ ಮೂಲಕ ಬಲಿಷ್ಠ, ಸದೃಢ ರಾಷ್ಟ್ರ ಕಟ್ಟಲು ಮುಂದಾಗಬೇಕು ಎಂದು ಸಹಾಯಕ ಔಷಧ ನಿಯಂತ್ರಕ ಡಾ.ವೀರೇಶ್ ಬಾಬು ತಿಳಿಸಿದರು.

ನಗರದ ಸಹಾಯಕ ಔಷಧ ನಿಯಂತ್ರಕರ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ೧೭೯ ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ದೇಶ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಮಹನೀಯರ ಕೊಡುಗೆಗಳನ್ನು ನೆನಪಿಸಿಕೊಂಡು ಭವಿಷ್ಯದಲ್ಲಿ ಅರ್ಥಪೂರ್ಣ, ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಎನ್‌ಡಿಪಿಎಸ್ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಜಿಕ್ ಔಷಧಗಳ ಬಗ್ಗೆ ಮಾಹಿತಿ ನೀಡಿದ ಅವರು, ವೈದ್ಯರ ಸಲಹಾ ಚೀಟಿ ಇಲ್ಲದೆ ಇಂತಹ ಔಷಧಗಳ ವಿತರಣೆ ಕಾನೂನು ಬಾಹಿರವಾಗಿರುತ್ತದೆ. ಜನರ ಆರೋಗ್ಯದ ಮೇಲೆ ಹಾಗೂ ಸಮಾಜದ ಮೇಲೂ ದುಷ್ಪರಿಣಾಮ ಬೀರುವ ಕಾರಣ ಅಂತಹ ಔಷಧಗಳನ್ನು ವಿತರಿಸುವಾಗ ಜಾಗರೂಕವಾಗಿಬೇಕು. ವೈದ್ಯರ ಸಲಹಾ ಚೀಟಿ ಇದ್ದರೆ ಮಾತ್ರ ವಿತರಿಸಬೇಕು ಎಂದರು.

ಅವುಗಳ ಮಾರಾಟ ಮತ್ತು ಖರೀದಿ ಮಾಹಿತಿ ಹಾಗೂ ರೋಗಿಯ ಮಾಹಿತಿಯನ್ನು ಔಷಧ ವ್ಯಾಪಾರಿಗಳು ಕಡ್ಡಾಯವಾಗಿ ಇಟ್ಟುಕೊಳ್ಳಲು ನಿರ್ದೇಶನ ನೀಡಿದರು.

ಸಮಾರಂಭದಲ್ಲಿ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.