ಜಿಲ್ಲೆ

ಕಾನೂನು ಕಾಲೇಜು ಆರಂಭಕ್ಕೆ ಮನವಿ ಮಾಡಿದ್ದ ಎಂಪಿ

ಚಾಮರಾಜನಗರ: ನಗರದ ಸರ್ಕಾರಿ ಕಾನೂನು ಕಾಲೇಜಿನ ಆರಂಭಕ್ಕಾಗಿ ಅನುಮೋದನೆ ನೀಡುವಂತೆ ಸಂಸದ ಸುನೀಲ್ ಬೋಸ್ ನವದೆಹಲಿಯ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಮಾಡಿದ್ದ ಮನವಿ ಪುರಸ್ಕಾರಗೊಂಡಿದೆ.

ಕಳೆದ ಏಪ್ರಿಲ್ 21ರಂದು ಎಂಪಿ ಸುನೀಲ್ ಬೋಸ್ ಬಾರ್ ಕೌನ್ಸಿಲ್ ಆಫ್ ಇಂಡಿಯಾಗೆ ಪತ್ರ ಬರೆದು ಚಾಮರಾಜನಗರದಲ್ಲಿ ಸರ್ಕಾರಿ ಕಾನೂನು ಕಾಲೇಜು ಸ್ಥಾಪನೆ ಮತ್ತು ಅನುಮೋದನೆಯ ತುರ್ತು ಅಗತ್ಯವನ್ನು ವಿವರವಾಗಿ ಮನದಟ್ಟು ಮಾಡಿದ್ದರು.

ಪ್ರಸ್ತುತ ಬಾರ್ ಕೌನ್ಸಿಲ್ ಚಾಮರಾಜನಗರದ ಸರ್ಕಾರಿ ಕಾನೂನು ಕಾಲೇಜಿಗೆ 2025-26 ಹಾಗೂ 2026-27ನೇ ಶೈಕ್ಷಣಿಕ ಅವಧಿಗೆ 60 ವಿದ್ಯಾರ್ಥಿಗಳ ಒಂದು ವಿಭಾಗದ ಪ್ರವೇಶದೊಂದಿಗೆ ಮೂರು ವರ್ಷಗಳ ಎಲ್.ಎಲ್.ಬಿ. ಪದವಿ ಕೋರ್ಸ್‌ಗೆ ಹೊಸ ಅನುಮೋದನೆ ನೀಡಲಾಗಿದೆ ಎಂದು ಜೂನ್ 2ರಂದು ಹುಬ್ಬಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ನಗರದ ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಿಗೆ ಪತ್ರದ ಮೂಲಕ ತಿಳಿಸಿದೆ.

ಕಾನೂನು ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಸುನೀಲ್ ಬೋಸ್ ಅವರು ತಮ್ಮ ಸಂಸದರ ಕ್ಷೇತ್ರಾಭಿವೃದ್ದಿ ನಿಧಿಯಿಂದ ಕಾನೂನು ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕ ಖರೀದಿಗಾಗಿ 5 ಲಕ್ಷ ರೂ. ಒದಗಿಸಲು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ತಿಳಿಸಿದ್ದಾರೆ.