ಚಾಮರಾಜನಗರ: ನಗರದ ಸರ್ಕಾರಿ ಕಾನೂನು ಕಾಲೇಜಿಗೆ ಸಂಸದ ಸುನೀಲ್ ಬೋಸ್ ಗುರುವಾರ ಭೇಟಿ ನೀಡಿ ಕಟ್ಟಡ ಪರಿಶೀಲಿಸಿದರು.
ಪ್ರಸಕ್ತ ಸಾಲಿನಿಂದಲೇ ಮೂರು ವರ್ಷಗಳ ಎಲ್.ಎಲ್.ಬಿ ಪದವಿ ಕೋರ್ಸ್ ಪ್ರವೇಶಕ್ಕೆ ಅನುಮೋದನೆ ದೊರೆತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರೊಂದಿಗೆ ಕಾಲೇಜಿಗೆ ಭೇಟಿ ನೀಡಿದ ಎಂಪಿ, ಕಾಲೇಜಿನಲ್ಲಿರುವ ಕೊಠಡಿಗಳು, ಲಭ್ಯವಿರುವ ಪೀಠೋಪಕರಣಗಳನ್ನು ವೀಕ್ಷಿಸಿದರು.
ಗ್ರಂಥಾಲಯ, ಪುಸ್ತಕಗಳನ್ನು ಇಡಲು ಕಪಾಟು, ಇನ್ನೂ ಬೇಕಿರುವ ಪೀಠೋಪಕರಣ, ಕುಡಿಯುವ ನೀರು ಸೇರಿದಂತೆ ಇತರ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಕಾಲೇಜಿಗೆ ಇನ್ನೂ ಅಗತ್ಯವಿರುವ ಸೌಲಭ್ಯ, ಶೌಚಗೃಹ, ಕಟ್ಟಡ ಚಾವಣಿ ದುರಸ್ತಿ ಹಾಗೂ ಪ್ರಸ್ತುತ ಕಟ್ಟಡಕ್ಕೆ ಆಗಬೇಕಿರುವ ಇತರ ಸೌಕರ್ಯಗಳ ಬಗ್ಗೆ ಪ್ರಾಂಶುಪಾಲ ಕೆ.ಎಸ್. ಲಲಿತಾ ಭಾಯಿ ಅವರಿಂದ ಮಾಹಿತಿ ಪಡೆದರು.
ಗ್ರಂಥಾಲಯಕ್ಕೆ ಅಗತ್ಯವಿರುವ ಪುಸ್ತಕಗಳು, ಶುದ್ಧ ಕುಡಿಯುವ ನೀರು ಸಂಬಂಧ ಅಗತ್ಯವಿರುವ ಅನುದಾನದ ನೆರವು ನೀಡಲಾಗುವುದೆಂದು ಇದೇ ವೇಳೆ ಭರವಸೆ ನೀಡಿದರು. ಬಳಿಕ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರೊಂದಿಗೆ ಕಾಲೇಜು ಕಟ್ಟಡಕ್ಕೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಚರ್ಚಿಸಿದರು. ನಂತರ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.
ಕಾಡಾ ಅಧ್ಯಕ್ಷ ಪಿ. ಮರಿಸ್ವಾಮಿ, ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಇತರರು ಇದ್ದರು.
ಎಲ್ಲರ ಪ್ರಯತ್ನದ ಫಲವಾಗಿ ಜಿಲ್ಲೆಗೆ ಕಾನೂನು ಕಾಲೇಜು ದೊರೆತಿದೆ. ಜಿಲ್ಲೆಯ ವಿದ್ಯಾರ್ಥಿಗಳು ಕಾನೂನು ಪದವಿ ಅಧ್ಯಯನ ಮಾಡಲು ಬೇರೆ ಕಡೆ ಹೋಗಬೇಕಿತ್ತು. ಜಿಲ್ಲೆಯಲ್ಲಿಯೇ ಕಾನೂನು ಕಾಲೇಜಿಗೆ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ಸುನೀಲ್ ಬೋಸ್, ಸಂಸದ, ಚಾಮರಾಜನಗರ