ಜಿಲ್ಲೆ

ಕಾನೂನು ಉಲ್ಲಂಸಿದರೆ ಗಡಿಪಾರು: ರೌಡಿಶೀಟರ್‌ಗಳಿಗೆ ಎಚ್ಚರಿಕೆ ನೀಡಿದ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಅಹಿತರಕರ ಘಟನೆಗಳಿಗೆ ಕಾರಣವಾಗುವ ರೌಡಿಶೀಟರ್‌ಗಳ ವಿರುದ್ಧ ನಿರ್ದಾಕ್ಷಣ್ಯವಾಗಿ ಗೂಂಟಾ ಕಾಯ್ದೆ ಕ್ರಮ ಕ್ರಮಕೈಗೊಳ್ಳುವ ಜತೆಗೆ ಗಡಿಪಾರು ಮಾಡಲಾಗುವುದು ಎಂದು ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಎಚ್ಚರಿಕೆ ನೀಡಿದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನೆಲಮಂಗಲ ಪೊಲೀಸ್ ಉಪವಿಭಾಗ ನಗರ ಠಾಣೆ, ಗ್ರಾಮಾಂತರ, ದಾಬಸ್‌ಪೇಟೆ, ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯ ಸುಮಾರು 50 ಮಂದಿ ರೌಡಿಶೀಟರುಗಳನ್ನು ಬುಧವಾರ ವಶಕ್ಕೆ ಪಡೆದು ಸುಭಾಷ್‌ನಗರದ ಗೋಪಿವೆಂಕಟೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ಎಲ್ಲರಿಗೂ ಸನ್ನಡತೆಯಿಂದ ಇರುವಂತೆ ತಿಳಿ ಹೇಳಿದರು.
ಪೊಲೀಸ್ ಉಪವಿಭಾಗ ವ್ಯಾಪ್ತಿಯ ಎಲ್ಲ ರೌಡಿ ಶೀಟರ್‌ಗಳ ಚಲನವಲನಗಳ ಬಗ್ಗೆ ನಿಗಾವಹಿಸಲಾಗುತ್ತಿದ್ದು, ವಿಶೇಷವಾಗಿ ಸಕ್ರಿಯ ರೌಡಿಶೀಟರ್ ಮೇಲೆ ಹೆಚ್ಚಿನ ಗಮನ ಇಡಲಾಗಿದೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಮುಖಂಡರೊಂದಿಗೆ ಸೇರಿ ಮತದಾರರಿಗೆ ದಮ್ಕಿ ಹಾಕುವುದು, ನಿಗದಿತ ವ್ಯಕ್ತಿಗೆ ಮತಹಾಕುವಂತೆ ಒತ್ತಾಯ ಮಾಡುವುದು, ಸಮಾಜಘಾತುಕ ಕೃತ್ಯ ನಡೆಸುವುದು, ಸಭ್ಯರನ್ನು ಹೆದರಿಸುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಶೇಷ ತಂಡ ರಚನೆ: ಗ್ರಾಮಾಂತರ ಜಿಲ್ಲೆಯಲ್ಲಿ ಅಪರಾಧ ಪ್ರಕರಣ ಹಾಗೂ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಡಿವೈಎಸ್‌ಪಿ, ವೃತ್ತ ನಿರೀಕ್ಷಕರು ಹಾಗೂ ನಿರೀಕ್ಷಕರನ್ನು ಒಳಗೊಂಡು ವಿಶೇಷ ತಂಡ ರಚಿಸಲಾಗಿದೆ. ರೌಡಿ ಶೀಟರ್‌ಗಳು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ, ನಿಕರವಾದ ವಿಳಾಸ, ಮಾಡುತ್ತಿರುವ ಕೆಲಸ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕು. ಸಮಾಜದ ಸೌಹಾರ್ದತೆ ಕದಡುವ ಕೆಲಸ ಮಾದರೆ ಕುಟುಂಬದೊಂದಿಗೆ ಉತ್ತಮ ಪ್ರಜೆಯಾಗಿ ಜೀವನ ನಡೆಸುವಂತೆ ಎಸ್‌ಪಿ ಕಿವಿಮಾತು ಹೇಳಿದರು.

ಇ-ಬೀಟ್ ವ್ಯವಸ್ಥೆ ಸಭೆ: ರೌಡಿಪರೇಡ್ ಬಳಿಕ ನಗರ ಪೊಲೀಸ್ ಠಾಣೆ, ಗ್ರಾಮಾಂತರ, ದಾಬಸ್‌ಪೇಟೆ, ತ್ಯಾಮಗೊಂಡ್ಲು ಠಾಣಾ ವ್ಯಾಪ್ತಿಯ 150ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗೆ ಇ-ಬೀಟ್ ವ್ಯವಸ್ಥೆ ಕುರಿತು ಅರಿವು ಮೂಡಿಸಲಾಯಿತು. ಸಾರ್ವಜನಿಕರಿಗೆ ಭದ್ರತೆ ಹಾಗೂ ಅಪರಾಧ ಪ್ರಕರಣ ನಿಯಂತ್ರಿಸುವ ನಿಟ್ಟಿನಲ್ಲಿ ಬೀಟ್ ವ್ಯವಸ್ಥೆ ಸಹಕಾರಿಯಾಗಿದೆ. ಪ್ರತಿ ವರ್ಷ ಠಾಣೆಯಲ್ಲಿ ಬೀಟ್‌ಗಳನ್ನು ಹಂಚಿಕೆ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅದರಂತೆ ರಾಜ್ಯ ಸರ್ಕಾರ ವಿಶೇಷವಾಗಿ ಇ-ಬೀಟ್ ವ್ಯವಸ್ಥೆ ಜಾರಿಗೊಳಿಸಿದ್ದು, ಕುರಿತು ಜಿಲ್ಲೆಯಾದ್ಯಂತ ಸಿಬ್ಬಂದಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ್‌ಬಾಲದಂಡಿ ಮಾಹಿತಿ ನೀಡಿದರು.


ಡಿವೈಎಸ್‌ಪಿ ಗೌತಮ್, ಇನ್ಸ್‌ಪೆಕ್ಟರ್‌ಗಳಾದ ಶಶಿಧರ್, ಬಿ.ಎಸ್.ಮಂಜುನಾಥ್, ಸುನೀಲ್, ಎಸ್.ರವಿ, ಎಸ್‌ಐ ಚಿಕ್ಕನರಸಿಂಹಯ್ಯ, ಎಎಸ್‌ಐ ರಘು ಮತ್ತಿತರರು ಉಪಸ್ಥಿತರಿದ್ದರು.