ಶಿಡ್ಲಘಟ್ಟ : ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಕಾನೂನಿನ ಅರಿವು ಮತ್ತು ನೆರವು ಒದಗಿಸುವ ದೃಷ್ಠಿಯಿಂದ ಕಾನೂನು ಸಾಕ್ಷರತಾ ರಥ ಕಾರ್ಯಕ್ರಮ ಆರಂಭವಾಗಿದ್ದು ನಾಗರಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಅಮರನಾರಾಯಣ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಕಂದಾಯ, ಶಿಕ್ಷಣ, ಆರೋಗ್ಯ, ಪೊಲೀಸ್, ಅರಣ್ಯ, ಕಾರ್ಮಿಕ, ಸಮಾಜ ಕಲ್ಯಾಣ, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಸಾಂತ್ವನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಹಾಗೂ ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಾಮಾನ್ಯ ನಾಗರಿಕರಿಗಿರುವ ಹಕ್ಕು ಮತ್ತು ಕಾನೂನು ಕಾಯ್ದೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡುವ ಉದ್ದೇಶದಿಂದ ಕಾನೂನು ಸಾಕ್ಷರತಾ ರಥ ಮೂಲಕ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ತಾಲೂಕಿನ ಬಿಜಿಎಸ್ ವಿದ್ಯಾ ಸಂಸ್ಥೆ, ನಲ್ಲೋಜನಹಳ್ಳಿ, ಎಸ್.ಎಂ.ಕೊಂಡರಾಜನಹಳ್ಳಿ, ಜಂಗಮಕೋಟೆ, ಗರುಡಾದ್ರಿ ಶಾಲೆ, ಎಚ್.ಕ್ರಾಸ್, ಕೊಂಡಪ್ಪಗಾರಹಳ್ಳಿ, ವಾಸವಿ ಶಾಲೆ, ಚಾಕ್ಕಪ್ಪನಹಳ್ಳಿ, ನಾರಾಯಣದಾಸರಹಳ್ಳಿ, ಮಳಮಾಚನಹಳ್ಳಿ, ಕಾಳನಾಯಕನಹಳ್ಳಿ ಹಾಗೂ ಶಿಡ್ಲಘಟ್ಟ ನಗರದಲ್ಲಿ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ದೇವರಾಜ್, ಡಿ.ಆರ್.ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್ ಎ.ಪಚ್ಚಾಪುರೆ, ಅಪರ ಸಿವಿಲ್ ನ್ಯಾಯಾಧೀಶೆ ಡಿ.ರೋಹಿಣಿ, ಜಿಲ್ಲಾ ಹಿರಿಯ ಶ್ರೇಣಿ ನ್ಯಾಯಾಧೀಶೆ ರೂಪಾ, ತಾಲೂಕು ವಕೀಲರ ಸಂಘದ ಗೌರವಾಧ್ಯಕ್ಷ ಎಂ.ಪಾಪಿರೆಡ್ಡಿ, ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ.ಲೋಕೇಶ್, ಎಪಿಪಿ ಕುಮುದಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ವೈ.ನಾಗವೇಣಿ, ಸಾಂತ್ವನ ಕೇಂದ್ರದ ವಿಜಯ ವೆಂಕಟರಾಮ್, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ವಕೀಲರಾದ ವಿ.ಸುಬ್ರಹ್ಮಣ್ಯಪ್ಪ, ಡಾ.ವಿಜಯಕುಮಾರ್ ಇತರರಿದ್ದರು.