ಜಿಲ್ಲೆ

ಕಾನೂನು ಅರಿವು ಆಂದೋಲನ ಯಶಸ್ವಿ

ಹಾಸನ : ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ತಾಲೂಕಿನಲ್ಲಿ 13 ದಿನಗಳಿಂದ ಆಯೋಜಿಸಿದ್ದ ಕಾನೂನು ಅರಿವು ಆಂದೋಲನ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಜನತೆಗೆ ಸದುಪಯೋಗವಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಮುಜಾಫರ್ ತಿಳಿಸಿದರು.


ಅರಕಲಗೂಡು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಆಂದೋಲನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಕ್ಷಿದಾರರು ತಮ್ಮ ವ್ಯಾಜ್ಯಗಳನ್ನು ಜನತಾ ನ್ಯಾಯಾಲಯಗಳ ಮೂಲಕ ಬಗೆಹರಿಸಿಕೊಂಡಾಗ ಹಣ, ಸಮಯ ಎರಡೂ ಉಳಿತಾಯವಾಗುತ್ತದೆ. ಪರಸ್ಪರರಲ್ಲಿ ವಿಶ್ವಾಸ, ಸ್ನೇಹ ಮುಂದುವರಿದು ಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ. ಜನರು ಇದರ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.


ಹೆಚ್ಚುವರಿ ನ್ಯಾಯಾಧೀಶರಾದ ಚೇತನಾ, ರಘು, ವಕಿಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ದೇವರಾಜ್, ಖಜಾಂಚಿ ಮಹಮದ್ ಇರ್ಷಾದ್, ವಕೀಲರಾದ ಶಂಕರಯ್ಯ, ಜನಾರ್ನ ಗುಪ್ತಾ, ಆರ್.ಕೆ.ಮಂಜುನಾಥ್ ಇತರರು ಇದ್ದರು. ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಎದುರು 900 ಪ್ರಕರಣಗಳು ಬಂದಿದ್ದು ಇದರಲ್ಲಿ 294 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ನ್ಯಾಯಾಧೀಶ ಮುಜಾಫರ್ ಉದ್ಘಾಟಿಸಿದರು. ಚೇತನಾ, ರಘು ಇತರರಿದ್ದರು.