ಹಾಸನ : ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಅರಿವು ಮೂಡಿವುದರಿಂದ ದೇಶ ಶಾಂತಿಯಿಂದಿರಲು ಮತ್ತಷ್ಟು ಸಹಾಯಕವಾಗಲಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ವಿಜಯಲಕ್ಷ್ಮಿ ದೇವಿ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಸನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ವಕೀಲರ ಸಂಘ ಹಾಗೂ ವಿವಿಧ ಇಲಾಖೆ ಮತ್ತು ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಅಪರಿಮಿತ ಕಾನೂನು ಅರಿವು ಮೂಲಕ ನಾಕರೀಕ ಸಬಲೀಕರಣ ಆಂದೋಲನ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಅವರು ಪ್ರತಿಯೊಬ್ಬರಿಗೂ ದೈನಂದಿನ ಜೀವನಕ್ಕೆ ಅನ್ವಯವಾಗುವ ಕಾನೂನಿನ ಕುರಿತು ಅರಿವು ಇರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಅರ್ಚನ ಮಾತನಾಡಿ, ಕಾನೂನಿನ ಅರಿವು ಕಾರ್ಯಕ್ರಮ ಪ್ರತೀ ನಾಗರೀಕನಿಗೂ ಪ್ರಯೋಜನಕಾರಿಯಾಗಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾಂತರಾಜು ಮಾತನಾಡಿ, ಕಾನೂನು ಎಂಬುದು ಒಂದು ಅಸ್ತ್ರವಾಗಿದ್ದು, ನಾಡಿನ ಸಂಪ್ರದಾಯಗಳು, ನಂಬಿಕೆಗಳು ಅನೇಕ ನಿಯಮಗಳನ್ನೊಳಗೊಂಡ ವ್ಯವಸ್ಥೆಯೆ ಕಾನೂನು .ಸಾಕಷ್ಟು ಜನರಲ್ಲಿ ಕಾನೂನಿನ ಅರಿವಿನ ಕೊರತೆ ಇದ್ದು, ಇದರಿಂದಾಗಿ ದೇಶಾದ್ಯಾಂತ ಅನೇಕ ಸಮಸ್ಯೆಗಳಿಗೆ ಕಾರಣವಾಗಿ ಅಪರಾಧ, ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿವೆ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಪ್ರತೀ ಗ್ರಾಮೀಣ ಭಾಗದ ಜನರಿಗೆ ಕಾನೂನನ್ನು ತಲುಪಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಪ್ರತೀ ಗ್ರಾಮಗಳಿಗೂ ಸಾರ್ವಜನಿಕರ ಸಹಕಾರದಲ್ಲಿ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿದ್ದು, ಎಲ್ಲಾ ಅಧಿಕಾರಿಗಳ ತಂಡ ಸಕ್ರೀಯವಾಗಿ ಇದರಲ್ಲಿ ಪಾಳ್ಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾತನಾಡಿ, ದೌರ್ಜನ್ಯಕ್ಕೊಳಗಾದ ಅನೇಕ ಸಂತ್ರಸ್ಥರಿಗೆ ಕಾನೂನಿನಲ್ಲಿ ಪರಿಹಾರಕ್ಕೆ ಅವಕಾಶಗಳಿವೆ ಎಂದು ತಿಳಿದಿರುವುದಿಲ್ಲ ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿದಾಗ ಕಾನೂನು ನಮಗೆ ನೆರವಾಗುತ್ತದೆ ಎಂಬ ಧೈರ್ಯ ಅವರಲ್ಲಿ ಹುಟ್ಟುತ್ತದೆ ಎಂದರು.
ಇದೇ ವೇಳೆ ಕಾನೂನು ಅರಿವು ಜಾಗೃತಿ ಮೂಡಿಸುವ ವಾಹನಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಕೆ ರವಿಕಾಂತ್ ಹಾಗೂ ಜಿಲ್ಲಾ ವಕೀಲ ಸಂಘದ ಅಧ್ಯಕ್ಷ ಮಂಜುನಾಥ್ ಮೂರ್ತಿ ಇತರರು ಇದ್ದರು.