ಹಾಸನ: ಕಾನೂನು ಬಗ್ಗೆ ತಿಳಿದುಕೊಂಡಿದ್ದರೇ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ನೆಮ್ಮದಿಯಾಗಿ ಜೀವನ ನಡೆಸಿಕೊಂಡು ಹೋಗಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ತಿಳಿಸಿದರು.
ನಗರದ ಶ್ರೀ ಗಂಧದ ಕೋಠಿ ಆವರಣದಲ್ಲಿರುವ ಬಾಲಕ ಮತ್ತು ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಮಾನವ ಹಕ್ಕುಗಳ ಪ್ರಜಾನೀತಿ ಸಮಿತಿ ಇವರ ಸಹಯೋಗದಲ್ಲಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಅಂಗವಾಗಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿಗಳಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ದೆಸೆಯಿಂದಲೇ ಕಾನೂನುಗಳ ಬಗ್ಗೆ ತಿಳಿದರೆ ಮುಂದೆ ಯಾವ ಸಂಕಷ್ಟಕ್ಕೂ ಸಿಲುಕುವುದಿಲ್ಲ ಎಂದು ಹೇಳಿದರು.
ಸಮಾಜದಲ್ಲಿ ಯಾವುದೊ ಒಂದು ತಪ್ಪನ್ನು ಮಾಡಿ ನ್ಯಾಯಾಲಯದ ಮುಂದೆ ಬಂದು ನನಗೆ ಕಾನೂನು ಬಗ್ಗೆ ತಿಳಿದಿರಲಿಲ್ಲ. ಗೊತ್ತಿರಲಿಲ್ಲ ನನಗೆ ಕ್ಷಮೆ ಕೊಡಬೇಕೆಂದು ವಾದವನ್ನು ನ್ಯಾಯಾಧೀಶರ ಮುಂದೆ ಮಂಡನೆ ಮಾಡಲು ಆಗುವುದಿಲ್ಲ. ಕಾನೂನಿನಲ್ಲಿ ತನ್ನದೆಯಾದ ತತ್ವಗಳಿದ್ದು, ಕಾನೂನು ತಿಳಿದಿಕೊಂಡರೇ ಮಾತ್ರ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ನೆಮ್ಮದಿಯಾಗಿ ತೃಪ್ತಿದಾಯಕವಾದ ಜೀವನ ನಡೆಸಿಕೊಂಡು ಹೋಗಲು ಸಾಧ್ಯ. ಕಾನೂನಿನ ಬಗ್ಗೆ ಜ್ಞಾನ, ಅರಿವು, ಜಾಗೃತಿ ಬಹಳ ಮುಖ್ಯವಾಗಿದೆ. ಕಾನೂನನ್ನು ತಿಳಿದುಕೊಳ್ಳದವರು ಸಂಘರ್ಷಕ್ಕೆ ಒಳಗಾಗಿ ಸಮಸ್ಯೆಗಳಿಗೆ ಸಿಲುಕಿಕೊಂಡರೆ ಮುಂದೆ ನಮ್ಮನ್ನು ಕಾಪಾಡಲು ಯಾರು ಬರುವುದಿಲ್ಲ ಎಂದು ಎಚ್ಚರಿಸಿದರು.
ಕಾನೂನು ಬಗ್ಗೆ ತಿಳಿಯುವುದು ಪ್ರತಿಯೊಬ್ಬರ ಕರ್ತವ್ಯ. ವಿದ್ಯಾರ್ಥಿಗಳಲ್ಲಿ ಕಾನೂನಿನ ಸಾಮಾನ್ಯ ಜ್ಞಾನದ ಅವಶ್ಯಕತೆ ಹೆಚ್ಚು ಇದೆ. ಕಾನೂನು ನಮಗೆ ಅವಶ್ಯಕತೆ ಇಲ್ಲ ಎಂದುಕೊಂಡರೆ ಮುಂದೆ ಅನಾಹುತಗಳು ಸಂಭವಿಸಿದರೆ ಅದರಿಂದ ಹೊರಗೆ ಬರುವುದಕ್ಕೆ ಬಹಳ ಕಷ್ಟಪಡಬೇಕಾಗುತ್ತದೆ. ಸಮಸ್ಯೆ ಬರುವ ಮೊದಲೇ ಕಾನೂನಿನ ಬಗ್ಗೆ ತಿಳಿದುಕೊಂಡಿದ್ದರೇ ಉತ್ತಮ. ಜತೆಗೆ ತಪ್ಪುಗಳನ್ನು ಮಾಡುವ ಸನ್ನಿವೇಶಗಳೇ ಬರುವುದಿಲ್ಲ. ಕಾನೂನಿಗೆ ಸಂಬಂಧಿಸಿದ ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಮನುಷ್ಯ ಬದುಕುವುದಕ್ಕೆ ಏನೇನು ಅಗತ್ಯವಿದೆಯೋ ಅವುಗಳೆಲ್ಲದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ. ಗಾಳಿ, ನೀರು, ಬೆಳಕು ಈ ಮೂರು ಅಂಶಗಳು ಮನುಷ್ಯನಿಗೆ ಎಷ್ಟು ಅಗತ್ಯವೋ ಹಾಗೆ ನಾವು ನೆಮ್ಮದಿಯಿಂದ ಜೀವನ ಸಾಗಿಸಲು ಕಾನೂನು ಕೂಡ ಅಷ್ಟೇ ಪ್ರಮುಖವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಮಾನವ ಹಕ್ಕುಗಳ ಪ್ರಜಾನೀತಿ ಸಮಿತಿ ಜಿಲ್ಲಾಧ್ಯಕ್ಷ ಎಂ.ಜಿ. ರಮೇಶ್, ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ ಆರ್. ಮರಿಜೋಸೇಫ್, ನಿವೃತ್ತ ಯೋಧ ಪುಟ್ಟಸ್ವಾಮಿ ಇತರರು ಉಪಸ್ಥಿತರಿದ್ದರು.