ಚಿಕ್ಕಮಗಳೂರು: ಪುರುಷ ಪ್ರಧಾನವಾದ ನಮ್ಮ ಸಮಾಜದಲ್ಲಿ ಮಹಿಳೆಯರು ತಮ್ಮ ಒಳತುಮುಲಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲಾಗದ ಸಂದಿಗ್ಧ ಪರಿಸ್ಥಿತಿಯನ್ನು ರಂಗದ ಮೇಲೆ `ಕಾಣೆಯಾದ ನೀಲಾ... ಕಂಡಿರೇ.. ನಾಟಕ ಯಶಸ್ವಿಯಾಗಿ ಬಿಂಬಿಸಿದೆ ಎಂದು ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ ವಿಶ್ಲೇಷಿಸಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಕಲ್ಕಟ್ಟೆ ಪುಸ್ತಕದ ಮನೆ, ಕಲಾ ಸೇವಾ ಸಂಘ, ಬಿಲೀವ್ ಫಿಸಿಯೋಥೆರಪಿ ಕ್ಲಿನಿಕ್ ಹಾಗೂ ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಸಹಯೋಗದಲ್ಲಿ ಪ್ರದರ್ಶನಗೊಂಡ ನಾಟಕ ವೀಕ್ಷಿಸಿ ಮಾತನಾಡಿದರು.
ಹೊರ ಹಾಕಲಾಗದ ತಮ್ಮ ಎಲ್ಲಾ ಭಾವನೆಗಳನ್ನು ನೀಲಾಳ ಮೂಲಕ ಇಬ್ಬರು ಮಹಿಳೆಯರು ಪ್ರಸ್ತುತಪಡಿಸುತ್ತಾರೆ. ಯಾವತ್ತೂ ನೀಲಾ ಕಾಣೆಯಾಗುವುದಿಲ್ಲ. ಅನೇಕ ಹೆಣ್ಣು ಮಕ್ಕಳು ತಮ್ಮ ನೈಜ ಭಾವನೆಗಳನ್ನು, ಕನಸುಗಳನ್ನು ಅರಳಿಸಿಕೊಳ್ಳಲಾಗದೆ ಹಿಂಜರಿಯುತ್ತಾ ತಾವೇ ಕಾಣೆಯಾಗುತ್ತಾರೆ. ಈ ಒಂದು ಗಂಟೆಯ ಈ ನಾಟಕ ಪುರುಷರಲ್ಲಿ ವೈಚಾರಿಕತೆಯ ಚಿಂತನೆಯನ್ನು ಹುಟ್ಟು ಹಾಕುತ್ತದೆ ಎಂದರು.
ಹಿರಿಯ ಕಲಾವಿದ ಚಂದ್ರಮೂರ್ತಿ ಮಾತನಾಡಿ, ನಾಟಕ ಉತ್ತಮವಾಗಿ ಮೂಡಿ ಬಂದಿದೆ. ಕಲಾವಿದರಿಬ್ಬರ ನಟನೆ ಸಹಜವಾಗಿತ್ತು. ಪ್ರಣಮ್ಯ ಕಶ್ಯಪ್ ಅವರ ಸಂಗೀತ ಉತ್ತಮವಾಗಿತ್ತು. ಇದು ರಾಜ್ಯ, ರಾಷ್ಟçದ ಎಲ್ಲೆಡೆ ಪ್ರದರ್ಶನಗೊಳ್ಳಲಿ ಎಂದು ಆಶಿಸಿದರು.
ಕ್ಯಾತನಬೀಡು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರವೀಶ್ ಬಸಪ್ಪ ಮಾತನಾಡಿ, ಬೆಳಕು ವೇದನೆಯ ಆಲಾಪನೆ ಸಂದರ್ಭಕ್ಕನುಗುಣವಾಗಿ ಅಗತ್ಯವಿತ್ತು. ಆಂಗಿಕ ಅಭಿನಯ ಇನ್ನೊಂದಷ್ಟು ಬೇಕಿತ್ತು. ರಂಗದ ಮೇಲಿನ ಮೊದಲನೇ ಪ್ರಯೋಗ ಇದು. ಇನ್ನೆರಡು-ಮೂರು ಪ್ರಯೋಗವಾದ ಬಳಿಕ ಪರಿಪಕ್ವತೆಯಿಂದ ಜನಮೆಚ್ಚುಗೆಗೆ ಪಾತ್ರವಾಗುವ ಎಲ್ಲಾ ವಿಶ್ವಾಸವನ್ನು ಈ ನಾಟಕ ಮೂಡಿಸಿದೆ ಎಂದು ಹೇಳಿದರು.
ನಿವೃತ್ತ ಕನ್ನಡ ಉಪನ್ಯಾಸಕಿ ಭಾರತಿ ಮಾತನಾಡಿ, ವಿಶಿಷ್ಟತೆಯನ್ನು, ತನ್ನೊಳಗಿನ ಅನನ್ಯತೆಯನ್ನು ಕಟ್ಟಿಕೊಟ್ಟ ನಾಟಕ ಇದು. ಹೆಣ್ಣಿನ ಅಸ್ಮಿತೆಯನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುವುದರ ಜೊತೆಗೆ ತನ್ನೊಳಗಿನ ಬದುಕಿನ ಅದರಾಚೆಯ ನಡುವಿನ ಎಲ್ಲಾ ಭಾವನೆಗಳನ್ನು ಈ ನಾಟಕ ವ್ಯಕ್ತಪಡಿಸುತ್ತದೆ. ನೀಲಾ ಎಲ್ಲೋ ಒಬ್ಬಳಲ್ಲ. ಪುರುಷ ಪ್ರಧಾನ ವ್ಯವಸ್ಥೆಯ ನಡುವೆ ತನ್ನೊಳಗಿನ ಎಲ್ಲಾ ತುಮುಲಗಳನ್ನು, ಪಾತ್ರಗಳನ್ನು ತನ್ನದಲ್ಲದ ಬದುಕಿನ ನಡುವೆ ವಾಸ್ತವತೆಯನ್ನು ಸಾಕ್ಷೀಕರಿಸುವ ಪ್ರಯತ್ನ ಇದರಲ್ಲಿದೆ. ಹಾಗೆಯೇ ರಂಗ ಹಿನ್ನೆಲೆಯ ಹಾಡುಗಳು ಗಮನ ಸೆಳೆದಿವೆ ಎಂದರು.
ನಾಟಕ ನಿರ್ದೇಶಕ ನಂದಕುಮಾರ್ ಮಾತನಾಡಿ, ಇದೊಂದು ಉತ್ತಮ ರಂಗ ಪ್ರಯೋಗ. ಚಿಕ್ಕಮಗಳೂರಿನಲ್ಲಿ ಇಂದಷ್ಟೇ ಕಲ್ಕಟ್ಟೆ ರಂಗ ಪಾದಾರ್ಪಣೆ ಮಾಡಿದೆ. ಇಂತಹ ಪ್ರದರ್ಶನಗಳು ಇಲ್ಲಿ ಇನ್ನೂ ಹೆಚ್ಚಾಗಬೇಕು. ಮಹಾಭಾರತವನ್ನು ಬರೆದವರು ವ್ಯಾಸರು. ಅದರಲ್ಲಿ ಕುಂತಿ ಹಾಗೂ ಗಾಂಧಾರಿಯ ವೇದನೆಗಳನ್ನು ತುಮುಲಗಳನ್ನು ಅಚ್ಚುಕಟ್ಟಾಗಿ ಚಿತ್ರಿಸಲಾಗಿದೆ. ಹಾಗೆಯೇ ರಾಮಾಯಣದಲ್ಲಿ ಸೀತೆ ಆಗಿರಬಹುದು, ಕೈಕೇಯಿ ಆಗಿರಬಹುದು. ಅದೇ ರೀತಿಯಲ್ಲಿ ನೀಲಾ ಕೂಡ ತನ್ನ ನೋವನ್ನು ತಾನು ಹೇಳಿಕೊಂಡಿದ್ದಾಳೆ. ಆಧುನಿಕ ರಂಗಭೂಮಿಯಲ್ಲಿ ಇದನ್ನು ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.
ನಾಟಕ ಪ್ರದರ್ಶನವನ್ನು ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್ ಉದ್ಘಾಟಿಸಿದರು. ಕಲ್ಕಟ್ಟೆ ಪುಸ್ತಕದ ಮನೆಯ ರೇಖಾ ನಾಗರಾಜರಾವ್ ಹಾಗೂ ಅಪೂರ್ವ ವೆಂಕಟೇಶ್ ರಂಗದ ಮೇಲೆ ಮನೋಜ್ಞವಾಗಿ ಅಭಿನಯಿಸಿದರು. ಮನಶಾಸ್ತçದ ವಿದ್ಯಾರ್ಥಿನಿ ಚಿನ್ಮಯಿ ಮಾತನಾಡಿ, ರಂಗ ನಿರ್ದೇಶಕಿ ಶ್ವೇತಾ ವಿನೀತ್‌ಕುಮಾರ್, ಸಂಗೀತ ನಿರ್ದೇಶಕ, ಗಝಲ್ ಗಾಯಕ ಇಮ್ತಿಯಾಜ್ ಸುಲ್ತಾನ್, ಶಿಕ್ಷಕಿ ಅನಿತಾ, ರಂಗ ನಿರ್ದೇಶಕ ನೀನಾಸಂನ ಎಂ.ವಿನೀತ್‌ಕುಮಾರ್, ಮಕ್ಕಳ ವೈದ್ಯ ಡಾ.ಜೆ.ಪಿ.ಕೃಷ್ಣೇಗೌಡ, ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಮತ್ತಿತರರಿದ್ದರು.