ಜಿಲ್ಲೆ

ಕಾಣೆಯಾಗಿದ್ದ ಮಹಿಳೆ ಶವವಾಗಿ ಪತ್ತೆ

reportermys

ಹಾಸನ: ಹಸು ಮೇಯಿಸಲು ಜಮೀನಿನ ಬಳಿ ತೆರಳಿದ್ದ ಸೈನಿಕ ರಾಕೇಶ್ ತಾಯಿ ರತ್ನಮ್ಮ ನಾಪತ್ತೆ ಪ್ರಕರಣದ ರಹಸ್ಯ ಒಂದೂವರೆ ತಿಂಗಳ ಬಳಿಕ ಬಯಲಾಗಿದೆ. ಯೋಧನ ತಾಯಿಯ ಶವ ಧರಿಸಿದ್ದ ಬಟ್ಟೆಯ ಜೊತೆ ಅಸ್ಥಿಪಂಜರ ರೂಪದಲ್ಲಿ ಪತ್ತೆಯಾಗಿದೆ.


ಭಾರತೀಯ ಸೇನೆಯಲ್ಲಿ ಶಿಮ್ಲಾದಲ್ಲಿ ಕರ್ತವ್ಯದಲ್ಲಿರುವ ಹಾಸನ ತಾಲೂಕು ನಾರಾಯಣಪುರ ಗ್ರಾಮದ ಸೈನಿಕ ರಾಕೇಶ್ ಕಳೆದ ಏಳು ವರ್ಷಗಳಿಂದ ದೇಶ ಕಾಯುವ ಸೇವೆಯಲ್ಲಿದ್ದಾರೆ. ಮನೆಯಲ್ಲಿದ್ದ ತಂದೆ ತಾಯಿ ಹೈನುಗಾರಿಕೆ ಮತ್ತು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ಜುಲೈ 20 ರಂದು ದನಗಳನ್ನು ಮೇಯಿಸಲು ಜಮೀನಿನ ಬಳಿ ಹೋಗಿದ್ದ ರತ್ಮಮ್ಮ ಸಂಜೆಯಾದರೂ ಮನೆಗೆ ಮರಳಿರಲಿಲ್ಲ. ಅವರ ಫೋನ್‌ಗೆ ಕರೆ ಮಾಡಿದಾಗ ಜಮೀನಿನ ಬಳಿಯಿದ್ದ ಬೇರೆಯವರು ಫೋನ್ ರಿಸೀವ್ ಮಾಡಿ ನಿಮ್ಮ ತಾಯಿ ಫೋನ್ ಜಮೀನಿನ ಬಳಿ ಬಿದ್ದಿದೆ ಎಂದು ಮಾಹಿತಿ ನೀಡಿದ್ದರು.


ಕೂಡಲೆ ಎಚ್ಚೆತ್ತ ಮಕ್ಕಳು ಶಾಂತಿಗ್ರಾಮ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಒಂದೆರಡು ದಿನ ನೋಡಿದ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು. ಈ ನಡುವೆ ಊರಿನಲ್ಲಿ ನಡೆದ ಕೆಲ ಘಟನೆ ಆಧರಿಸಿ ರತ್ಮಮ್ಮ ಸಂಬಂಧಿಗಳು ‘ರತ್ಮಮ್ಮ ಕಣ್ಮರೆ ಹಿಂದೆ ಮಹೇಶ ಎಂಬಾತನ ಕೈವಾಡ ಇದೆ’ ಎಂಬುದಾಗಿ ಅನುಮಾನ ವ್ಯಕ್ತಪಡಿಸಿದ್ದರು.


ಪೊಲೀಸರು ಆತನನ್ನು ಕರೆತಂದು ವಿಚಾರಣೆ ಮಾಡಿದ್ದರೂ ರತ್ನಮ್ಮನ ಸುಳಿವು ಸಿಕ್ಕಿರಲಿಲ್ಲ. ಸೇನೆಯಲ್ಲಿ ಇದ್ದ ಮಗ ಊರಿಗೆ ಬಂದು ಒಂದು ತಿಂಗಳು ಹುಡುಕಾಡಿದರೂ ಪ್ರಯೋಜನ ಆಗಿರಲಿಲ್ಲ. ಆದರೆ ಸೆ.12 ರಂದು ಸೋಮವಾರ ನಾರಾಯಣಪುರದ ಜಗದೀಶ್ ಎಂಬುವರು ತಮ್ಮ ಜೋಳದ ಹೊಲದಲ್ಲಿ ಜೋಳ ಕಟಾವಿಗೆ ಹೋದಾಗ ಹೊಲದ ಮಧ್ಯದಲ್ಲಿ ಅಸ್ತಿ ಪಂಜರ ಪತ್ತೆಯಾಗಿದೆ. ಅಲ್ಲಿಯೇ ರತ್ನಮ್ಮ ಧರಿಸಿದ್ದ ಸೀರೆ ಕೂಡ ಸಿಕ್ಕಿದೆ. ಹಾಗಾಗಿ ಅದು ರತ್ನಮ್ಮನದೇ ಅಸ್ತಿ ಪಂಜರ ಎಂದು ಗುರುತಿಸಲಾಗಿದೆ. ಕೂಡಲೆ ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿ ಸಿಕ್ಕ ಅಸ್ತಿ ಪಂಜರ ವಶಕ್ಕೆ ಪಡೆದು ತನಿಖೆ ಪ್ರಾರಂಭಿಸಿದ್ದಾರೆ.