ಜಿಲ್ಲೆ

ಕಾಣದ ದುರಸ್ತಿ ತಪ್ಪದ ಹೈರಾಣ

ರಾಜಕುಮಾರ ಹೊನ್ನಾಡೆ ಹುಲಸೂರು

ಮೀರಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಣಮಂತವಾಡಿ ಗ್ರಾಮದಲ್ಲಿ ನಿರ್ವಹಣೆ ಕೊರತೆ ಮತ್ತು ವಿದ್ಯುತ್ ವ್ಯತ್ಯಯದಿಂದಾಗಿ ಗ್ರಾಮಸ್ಥರು ಮಳೆಗಾಲದಲ್ಲೂ ಕುಡಿಯುವ ನೀರಿಗೆ ಪರಿತಪಿಸುವಂಥ ಸ್ಥಿತಿ ಇದೆ.

2000ಕ್ಕೂ ಹೆಚ್ಚು ಜನಸಂಖ್ಯೆಯ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಈ ಊರಲ್ಲಿ ಎರಡು ಕೊಳವೆ ಬಾವಿ, ಒಂದು ತೆರೆದ ಬಾವಿ ಇದೆ. ಕೊಳವೆ ಬಾವಿ ಮತ್ತು ತೆರೆದ ಬಾವಿಯಲ್ಲಿ ಸಾಕಷ್ಟು ನೀರಿದೆ. ಆದರೆ ಕೊಳವೆ ಬಾವಿಗಳ ಮೋಟಾರ್ ಕೆಟ್ಟಿದ್ದರೆ, ತೆರೆದ ಬಾವಿಗೆ ವಿದ್ಯುತ್ ಸಂಪರ್ಕದ ಸಮಸ್ಯೆ ಇದೆ. ಹೀಗಾಗಿ ಗ್ರಾಮಸ್ಥರು ಅನಿವಾರ್ಯ ಎನ್ನುವಂತೆ ದೂರದಲ್ಲಿರುವ ಖಾಸಗಿಯವರ ತೆರೆದ ಬಾವಿಗಳಿಂದ ನೀರು ಹೊತ್ತು ತರಬೇಕಾಗಿದೆ.

ಇನ್ನು ಗ್ರಾಮದಲ್ಲಿ ಶುದ್ಧ ನೀರು ಪೂರೈಕೆಗೂ ಸಮಸ್ಯೆ ಎದುರಾಗಿದೆ. ಇತ್ತೀಚೆಗೆ ನಿರಂತರ ಮಳೆ ಸುರಿಯುತ್ತಿದ್ದು, ಜನರು ತೆರೆದ ಬಾವಿಗಳಿಂದ ನೀರು ತಂದು ಬಳಸುತ್ತಿದ್ದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಜನಾರೋಗ್ಯ ದೃಷ್ಟಿಯಿಂದ ಸಂಬಂಧಿತರು ಕೂಡಲೇ ಊರಿಗೆ ಸಮರ್ಪಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರು ಹಕ್ಕೊತ್ತಾಯವಾಗಿದೆ.

ಊರಲ್ಲಿ ನೀರಿನ ಸಮಸ್ಯೆಯಿಂದಾಗಿ ಮಳೆಗಾಲದಲ್ಲೂ ರೈತರ ಹೊಲದಲ್ಲಿನ ತೆರೆದ ಬಾವಿಯಿಂದ ನೀರು ತರುತ್ತಿದ್ದೇವೆ. ಗ್ರಾಪಂ ಪಿಡಿಒಗೆ ಹಲವು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಪಿಡಿಒಗೆ ಫೋನ್ ಕರೆ ಮಾಡಿದರೆ ರಿಸೀವ್ ಮಾಡುತ್ತಿಲ್ಲ. ಶೀಘ್ರ ಸಮಸ್ಯೆಗೆ ಮುಕ್ತಿ ನೀಡಬೇಕು.| ರಾಜಕುಮಾರ ಬಿರಾದಾರ, ಗ್ರಾಮಸ್ಥ ಹಣಮಂತವಾಡಿ
ಹಣಮಂತವಾಡಿ ಗ್ರಾಮದಲ್ಲಿ ನೀರಿನ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ವಿದ್ಯುತ್ ಸಮಸ್ಯೆ ಸರಿಪಡಿಸಲು ಹುಲಸೂರು ಜೆಸ್ಕಾಂ ಜೆಇ ಗಮನಕ್ಕೆ ತಂದಿದ್ದೇನೆ. ಶೀಘ್ರವೇ ಕೊಳವೆ ಬಾವಿ ದುರಸ್ತಿ ಮಾಡಿಸಲಾಗುವುದು.| ಗಿರೀಶ ಪಿಡಿಒ ಮೀರಕಲ್