ಮಾಜಿ ಸಚಿವ ಬಿ.ಬಿ.ನಿಂಗಯ್ಯ 
ಜಿಲ್ಲೆ

ಕಾಡುಪ್ರಾಣಿಗಳಿಂದಾಗುವ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಿ

ಚಿಕ್ಕಮಗಳೂರು: ಮಾನವ, ಪ್ರಾಣಿ ಸಂಘರ್ಷ ತಪ್ಪಿಸುವುದು ಮತ್ತು ಪ್ರಾಣಿಗಳಿಂದಾಗುವ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ಕೊಡಿಸಿಕೊಡುವ ನಿಟ್ಟಿನಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ವಿಸೃತ ಚರ್ಚೆಗೆ ಅವಕಾಶ ಕಲ್ಪಿಸುವಂತೆ ಕೋರಿ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳು ಮತ್ತು ಅರಣ್ಯ ಸಚಿವರನ್ನು ಭೇಟಿ ಮಾಡಿ ಆಗ್ರಹಿಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಒತ್ತಾಯಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ೪ ತಂಡಗಳಲ್ಲಿ ಒಟ್ಟು ೬೦ ಆನೆಗಳು ಸಂಚರಿಸುತ್ತಿವೆ. ಅವುಗಳಿಂದ ಬೆಳೆ ಹಾನಿ, ಜೀವಹಾನಿಯಾಗುತ್ತಿದ್ದು ಇದನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಗ್ರ ಚರ್ಚೆ ನಡೆಸಿ ವಿಶೇಷ ಕಾಯ್ದೆ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.

ಅರಣ್ಯಗಳಲ್ಲಿ ಆನೆಗಳಿಗೆ ಅಗತ್ಯವಿರುವ ಮೇವು, ನೀರು ದೊರಕದ ಕಾರಣ ಜನವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿದ್ದು ಇದನ್ನು ತಪ್ಪಿಸಲು ಸರ್ಕಾರಗಳು ಬೇಸಿಗೆ ಕಾಲದಲ್ಲಿಯೂ ವನ್ಯಮೃಗಗಳಿಗೆ ನೀರು ದೊರೆಯುವಂತೆ ಅರಣ್ಯಗಳಲ್ಲಿ ಹರಿಯುವ ನದಿಗಳಿಗೆ ಚೆಕ್ ಡ್ಯಾಂಗಳ ನಿರ್ಮಾಣ, ಮೇವುಗಳನ್ನು ಬೆಳೆಸುವ ಬಗ್ಗೆಯೂ ಚಿಂತನೆ ನಡೆಸಬೇಕಿದೆ ಎಂದು ಸಲಹೆ ನೀಡಿದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ೨೪ ಆನೆಗಳ ತಂಡ ಕಾಫಿ ತೋಟಗಳು, ಅಡಿಕೆ ತೋಟಗಳು ಸೇರಿದಂತೆ ಬೆಳೆಗಳಿಗೆ ದಾಳಿ ನಡೆಸಿ ಬೆಳೆ ಹಾನಿ ಮಾಡುತ್ತಿವೆ ಈ ಆನೆಗಳನ್ನು ಸ್ಥಳಾಂತರಿಸುವುದು, ಆನೆಗಳು ಮತ್ತೆ ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯೊಡ್ಡಲು ಅಗತ್ಯವಿರುವ ಕೂಡಲೇ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತೊಂಡವಳ್ಳಿ ಗುಡ್ಡದಲ್ಲಿ ಆನೆಗಳು ವಾಸ್ತವ್ಯ ಹೂಡಿದ್ದು ಹಗಲಲ್ಲಿ ವಿಶ್ರಾಂತಿ ಪಡೆದು ರಾತ್ರಿಯಲ್ಲಿ ಕಾರ್ಯಾಚರಣೆ ನಡೆಸಿರುವ ಆನೆಗಳು ಗ್ರಾಮಗಳ ಬೈರೇಗೌಡ, ದಿನೇಶ, ದ್ಯಾವಯ್ಯ, ಗುರುಮೂರ್ತಿ, ತಮ್ಮಣ್ಣಗೌಡ, ಪುಟ್ಟೇಗೌಡ, ಅಶ್ವಥ್, ನಾರಾಯಣ, ಚಂದ್ರು, ಪುರುಷೋತ್ತಮ, ಈರಯ್ಯ, ಮಲ್ಲೇಶ್ ಸೇರಿದಂತೆ ಹಲವರಿಗೆ ಸೇರಿದ ೨೫೦ ಎಕರೆ ಕಾಫಿ ತೋಟಗಳಿಗೆ ನುಗ್ಗಿದ ಕಾಡಾನೆಗಳು ಮೆಣಸು, ಅಡಿಕೆ, ಕಾಫಿ, ಶುಂಠಿ, ಭತ್ತ, ರಾಗಿ ಬೆಳೆಗಳನ್ನು ಹಾಳು ಮಾಡಿದ್ದು ಇದರಿಂದ ಲಕ್ಷಾಂತರ ರೂಪಾಯಿಗಳ ನಷ್ಟವುಂಟಾಗಿದೆ ಇದರಿಂದ ರೈತರು ಕಂಗಾಲಾಗಿದ್ದಾರೆ ಎಂದರು.

ಬೆಳೆ ನಷ್ಟಕ್ಕೆ ಪರಿಹಾರ ರೂಪವಾಗಿ ಅರಣ್ಯ ಇಲಾಖೆ ಸಣ್ಣ ಮೊತ್ತದ ಹಣ ನೀಡುತ್ತಿದೆ. ಇದು ಸಾಲುತ್ತಿಲ್ಲ. ಪರಿಹಾರವನ್ನು ವೈಜ್ಞಾನಿಕವಾಗಿ ಪರಿಷ್ಕರಿಸಿ ನ್ಯಾಯೋಜಿತವಾಗಿ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಈ ಬಗ್ಗೆಯೂ ಸದನದಲ್ಲಿ ಚರ್ಚಿಸಬೇಕಿದೆ ಎಂದು ಒತ್ತಾಯಿಸಿದರು.

ಇದು ಕಾಫಿ ಕೊಯ್ಲಿನ ಸಂದರ್ಭವಾಗಿದ್ದು ಆನೆಗಳಿಗೆ ಹೆದರಿ ಕಾರ್ಮಿಕರು ತೋಟಗಳಿಗೆ ಕೆಲಸಕ್ಕೆ ಹೋಗಲು ಹೆದರುತ್ತಿದ್ದಾರೆ. ಆನೆಗಳನ್ನು ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗಳು ಮರಿ ಹಾಕಿರುವ ಬಗ್ಗೆ ಹೇಳುತ್ತಿದ್ದಾರೆ. ಇದರಿಂದ ರೈತರು ಭೀತಿಯಿಂದಲೇ ಸಂಚರಿಸಬೇಕಿದೆ ಎಂದರು.

ಮೈಸೂರಿನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಮ್ಮದೇ ಜಿಲ್ಲೆಯ ಗೊ.ರು. ಚೆನ್ನಬಸಪ್ಪನವರನ್ನು ಆಯ್ಕೆ ಮಾಡಿರುವುದು ಜಿಲ್ಲೆಗೆ ಸಂದ ಗೌರವವಾಗಿದ್ದು, ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷö್ಮಣ್, ಬೆಳೆಗಾರರ ಹಿತರಕ್ಷಣಾ ಸಮಿತಿಯ ಮುಖಂಡ ಹೊಲದಗದ್ದೆ ಗಿರೀಶ್, ಚಲವಾದಿ ಮಹಾಸಭಾದ ಅಧ್ಯಕ್ಷ ರಘು, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಮಂಜಯ್ಯ ಮತ್ತಿತರರಿದ್ದರು.