ಹೊಸನಗರ: ಹೊಸೂರು (ಸಂಪೇಕಟ್ಟೆ) ಗ್ರಾಪಂ ವ್ಯಾಪ್ತಿಯಲ್ಲಿ ಕಾಡುಕೋಣಗಳ ಹಾವಳಿ ಮಿತಿಮೀರಿದ್ದು ಬೆಳೆಯನ್ನು ಉಳಿಸಿಕೊಳ್ಳುವುದಿರಲಿ... ನಾವು ಬದುಕುವುದೇ ಕಷ್ಟವಾಗಿದೆ ಎಂದು ಮತ್ತಿಕೈ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ನಗರ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಕಾಡುಕೋಣಗಳು ನಮ್ಮ ಜೀವ ಹಿಂಡುತ್ತಿವೆ. ಈ ಬಗ್ಗೆ ಸಾಕಷ್ಟು ಸಮಯದಿಂದ ಪ್ರತಿಭಟನೆ, ಮನವಿ ಸಲ್ಲಿಸುತ್ತಾ ಬಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಮತ್ತಿಕೈ ಗ್ರಾಮಸ್ಥರಿಗೆ ಕೃಷಿಯೇ ಬದುಕಿಗೆ ಆಧಾರವಾಗಿದೆ. ಆದರೆ ಕಾಡುಕೋಣಗಳ ಹಾವಳಿಯಿಂದ ಅಡಕೆ ಸೇರಿದಂತೆ ಬೆಳೆದ ಬೆಳೆಗಳು ಸರ್ವನಾಶವಾಗುತ್ತಿವೆ. ಸರ್ಕಾರ ಪ್ರಾಣಿಗಳಿಗೆ ನೀಡುತ್ತಿರುವ ಮಾನ್ಯತೆಯನ್ನು ಜನರಿಗೆ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ನಗರ ವಲಯಾಧಿಕಾರಿ ಸಂಜಯ್ ಗ್ರಾಮಸ್ಥರ ಮನವಿ ಆಲಿಸಿದರು. ಆದರೆ ಡಿಎಫ್‌ಒ ಎಂ.ರಾಮಕೃಷ್ಣಪ್ಪ ಬಂದು ಮನವಿ ಆಲಿಸಬೇಕು ಎಂದು ಪಟ್ಟುಹಿಡಿದ ಕಾರಣ ಸಂಜಯ್ ಅವರು ಡಿಎಫ್‌ಒಗೆ ಕರೆ ಮಾಡಿ ಗ್ರಾಮಸ್ಥರ ಬೇಡಿಕೆಯನ್ನು ಮುಂದಿಟ್ಟರು. ಬಳಿಕ ಗ್ರಾಮಸ್ಥರು ಮಾತನಾಡಿ, ಕಾಡುಕೋಣಗಳ ಹಾವಳಿ ವಿಪರೀತವಾಗಿದೆ, ಸೋಲಾರ್ ಬೇಲಿಯಿಂದ ನಿಯಂತ್ರಣಕ್ಕೆ ತರುವುದು ಅಸಾಧ್ಯ ಎಂದು ಅಲವತ್ತುಕೊಂಡರು. ನಮ್ಮ ಗ್ರಾಮದಿಂದ ಮೂಕಾಂಬಿಕಾ ಅಭಯಾರಣ್ಯ ಕೇವಲ 3 ಕಿ.ಮೀ. ದೂರದಲ್ಲಿದೆ. ಕಾಡುಕೋಣಗಳನ್ನು ಅಲ್ಲಿಗೆ ಅಟ್ಟುವ ಮೂಲಕ ಕ್ರಮಕೈಗೊಳ್ಳಿ ಎಂದು ಪಟ್ಟುಹಿಡಿದರು.
ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಡಿಎಫ್‌ಒ, ಮತ್ತಿಕೈ ಗ್ರಾಮದಲ್ಲಿ ಆಂಟಿ ಡಿಫ್ರೆಷನ್ ಕ್ಯಾಂಪ್ ಆಯೋಜನೆ ಮಾಡಿ ಕೂಡಲೆ ಕಾರ್ಯೋನ್ಮುಖರಾಗುವುದಾಗಿ ಭರವಸೆ ನೀಡಿದರು. ಬಳಿಕ ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಆರ್‌ಎಫ್‌ಒ ಸಂಜಯ್‌ಗೆ ಸೂಚಿಸಿದರು.