ನಾಪೋಕ್ಲು: ಕಾಡುಕೋಣದ ಮಾಂಸ ಸಾಗಿಸುತ್ತಿದ್ದ ಕಾರು ಪೊಲೀಸರ ದಾಳಿ ವೇಳೆ ಅಪಘಾತಕ್ಕೀಡಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.
ನಾಪೋಕ್ಲು ಸಮೀಪದ ಕಕ್ಕಬ್ಬೆ ಕುಂಜೀಲ ಗ್ರಾಮದಿಂದ ಶುಕ್ರವಾರ ರಾತ್ರಿ ಕಾಡುಕೋಣ ಮಾಂಸವನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ನಾಪೋಕ್ಲು ಠಾಣೆ ಪೊಲೀಸರು ಬೆನ್ನಟ್ಟಿದ್ದರು. ಈ ವೇಳೆ ಮಡಿಕೇರಿಯ ಸುಭಾಸ್‌ನಗರದ ಬಳಿ ಆರೋಪಿಗಳಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಆರೋಪಿಗಳು ಪರಾರಿಯಾಗಿದ್ದಾರೆ.
ಮಡಿಕೇರಿ ಠಾಣೆ ಪೊಲೀಸರ ಸಹಕಾರದಲ್ಲಿ ನಾಪೋಕ್ಲು ಪೋಲೀಸರು ಚೀಲಗಳಲ್ಲಿದ್ದ 50 ಕೆಜಿ ಕಾಡುಕೋಣ ಮಾಂಸವನ್ನು ವಾಹನ ಸಮೇತ ವಶಪಡಿಸಿಕೊಂಡರು. ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮರಾಜನ್ , ಪೊಲೀಸ್ ಉಪನಿರೀಕ್ಷಕ ಸುಂದರರಾಜ್ ನಿರ್ದೇಶನ ಹಾಗೂ ಡಿವೈಎಸ್ಪಿ ಜಗದೀಶ್, ವೃತ್ತ ನಿರೀಕ್ಷಕ ಶೇಖರ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಪ್ರಕರಣವನ್ನು ಅರಣ್ಯ ವನ್ಯಜೀವಿ ಸಂರಕ್ಷಣಾ ಇಲಾಖೆಗೆ ವರ್ಗಾಯಿಸಲಾಗಿದೆ.