ಮದ್ದೂರು: ಜಿಲ್ಲೆ ಮತ್ತು ತಾಲೂಕಿನಾದ್ಯಂತ ಹೆಚ್ಚಿರುವ ಮುಳ್ಳುಹಂದಿ, ಕಾಡು ಹಂದಿಗಳ ಹಾವಳಿ ತಡೆಯುವುದರ ಜತೆಗೆ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾಡು ಪ್ರಾಣಿಗಳಿಂದ ಹಾನಿಗೊಳಗಾಗಿರುವ ತೆಂಗು, ಕಬ್ಬು ಸೇರಿದಂತೆ ವಿವಿಧ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪ್ರಗತಿಪರ ಸಂಘಟನೆಗಳ ಮುಖಂಡ ನ.ಲಿ.ಕೃಷ್ಣ ಮಾತನಾಡಿ, 8 ವರ್ಷಗಳಿಂದ ಮುಳ್ಳು, ಕಾಡು ಹಂದಿಗಳ ಹಾವಳಿ ಮಿತಿ ಮೀರಿದೆ. ತೆಂಗು, ಬಾಳೆ ಮತ್ತು ಕಬ್ಬು ಬೆಳೆಗಳು ಕಾಡು ಪ್ರಾಣಿಗಳ ದಾಳಿಯಿಂದ ನಾಶಹೊಂದಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಈ ಕೂಡಲೇ ಸರ್ಕಾರ ನಷ್ಟದ ಸರ್ವೇ ನಡೆಸಬೇಕು. ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು. ಹಂದಿಗಳ ಹಾವಳಿ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಅನುಸರಿಸಬೇಕು ಆಗ್ರಹಿಸಿದರು.
ರಾಜ್ಯ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಲಕ್ಷ್ಮಣ್ ಚನ್ನಸಂದ್ರ ಮಾತನಾಡಿ, ತಾಲೂಕಿನಲ್ಲಿ ಚಿರತೆ, ಮುಳ್ಳು ಹಂದಿ, ಕಾಡು ಹಂದಿ, ಪಕ್ಷಿಗಳು ಹಾಗೂ ಕೋತಿಗಳಿಂದ ಬೆಳೆಗಳು ನಾಶವಾಗಿವೆ. ಜತೆಗೆ ಭತ್ತಕ್ಕೆ ಬೆಂಕಿ ರೋಗ ಕಾಣಿಸಿಕೊಂಡಿದೆ. ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಕೆ.ಎಂ.ರೇಖಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪರಮೇಶ್, ಅರಣ್ಯ ಇಲಾಖೆಯ ತಾಲೂಕು ವಲಯಾರಣ್ಯಾಧಿಕಾರಿ ಗವಿಪ್ಪ, ತಾಪಂ ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಅಧಿಕಾರಿಗಳು ಆಗಮಿಸಿ ಅಹವಾಲು ಆಲಿಸಿದರು.
ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ ಮಾತನಾಡಿ, ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸುವ ಸಂಬಂಧ ಎಲ್ಲ ಇಲಾಖೆಗಳ ಅಧಿಕಾರಿಗಳ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಬೆಳೆ ನಾಶವಾದ ರೈತರು ಸೂಕ್ತ ದಾಖಲಾತಿಗಳೊಂದಿಗೆ ಸಂಬಂಧಿಸಿದ ಗ್ರಾಪಂಗೆ ಕಚೇರಿಗೆ ಅರ್ಜಿ ಸಲ್ಲಿಸಿದರೆ ಪರಿಹಾರ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರಗತಿಪರ ಸಂಘಟನೆಗಳ ಮುಖಂಡರಾದ ಸೊ.ಶಿ.ಪ್ರಕಾಶ್, ಅಣ್ಣೂರು ಮಹೇಂದ್ರ, ಪುಟ್ಟಸ್ವಾಮಿ, ಮಲ್ಲೇಶ್, ಅಂದಾನಿ, ಚಿಕ್ಕಮರಿಗೌಡ, ಅಶೋಕ್, ಸೌಭಾಗ್ಯಮ್ಮ ಮಹಾದೇವು, ಸೆಲ್ವಿಮುರಗೇಶ್, ವೆಂಕಟೇಶ್, ಉಮೇಶ್, ದೇಶಹಳ್ಳಿ ಶಿವಪ್ಪ, ಚಂದ್ರಶೇಖರ್, ಕ್ರಾಂತಿಸಿಂಹ, ದಯಾನಂದ್, ಬಸವರಾಜ, ರವೀಂದ್ರ, ರಾಕೇಶ್, ಇಂದಿರಾ, ಗೊರವನಹಳ್ಳಿ ಪ್ರಸನ್ನ, ರಾಕೇಶ್ ಇದ್ದರು.
ಬೇಡಿಕೆಗಳು
ತೆಂಗಿನ ಗಿಡಕ್ಕೆ ಅದರ ಜೀವಿತ ಮತ್ತು ಫಸಲು ಅಂದಾಜಿಸಿ ಗಿಡವೊಂದಕ್ಕೆ 20,000 ರೂ. ಪರಿಹಾರ ನೀಡಬೇಕು. ಕಬ್ಬಿಗೆ ಎಕರೆಗೆ ಸರಾಸರಿ ಇಳುವರಿ ಅಂದಾಜಿನ ಅರ್ಧ ಬೆಳೆಗೆ ಪರಿಹಾರವಾಗಿ 40,000 ರೂ. ಪರಿಹಾರ ನೀಡಬೇಕು. ಬಾಳೆಗೆ ಪ್ರತಿ ಗಿಡ 20 ಕೆ.ಜಿ. ಬಾಳೆಯಂತೆ ಪರಿಗಣಿಸಿ ಕನಿಷ್ಠ 750 ರೂ. ಪರಿಹಾರ ನೀಡಬೇಕು. ಹಂದಿಗಳ ಹಾವಳಿ ತಡೆಗೆ ಪರಿಣಾಮಕಾರಿ ವಿಧಾನ ಅನುಸರಿಸಬೇಕು ಮತ್ತು ಹಂದಿ ಹಾವಳಿ ಪ್ರದೇಶ ಗುರುತಿಸಿ ನಷ್ಟದ ಸರ್ವೇ ನಡೆಸಬೇಕು.
ನ.21 ರಂದು ವಿಜಯವಾಣಿಯಲ್ಲಿ ಬೆಳೆ ರಕ್ಷಿಸಲು ರೈತ ಹರಸಾಹಸ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಈ ಸಂಬಂಧ ರೈತರು ವರದಿಗೆ ಪ್ರಶಂಸೆ ವ್ಯಕ್ತಪಡಿಸಿದರು.