ಜಿಲ್ಲೆ

ಕಾಡು ಸಂರಕ್ಷಿಸಿದರೇ, ನಾಡು ಸಮೃದ್ಧಿಯಾಗಿರುತ್ತದೆ

ಚಾಮರಾಜನಗರ: ಕಾಡನ್ನು ನಾಶಮಾಡದೇ ಸಂರಕ್ಷಣೆ ಮಾಡಿದರೇ, ನಾಡು ಕೂಡ ಸಮೃದ್ಧಿಯಾಗಿರುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ತಿಳಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೆ ಕೆಡಿಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಾಲಾ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ನಗರಸಭೆ ಹಾಗೂ ಮೈಸೂರಿನ ಮಡಿಲು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಸುತ್ತಲಿನ ಪರಿಸರ ಚೆನ್ನಾಗಿ ಕಾಪಾಡಿದರೇ, ನಾವು ಆರೋಗ್ಯವಂತರಾಗಿ ಬದುಕಬಹುದಾಗಿದೆ. ನಮಗೆ ಒಳ್ಳೆಯ ಆಮ್ಲಜನಕ ಸಿಗಬೇಕಾದರೇ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕಾಗಿದೆ. ವಿದ್ಯಾರ್ಥಿಗಳು ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಿ, ನೀರನ್ನು ಮಿತಿಯಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.

ನಮ್ಮ ಸುತ್ತಲಿನ ಕಾಡನ್ನು ನಾಶ ಮಾಡದೇ ಸಂರಕ್ಷಣೆ ಮಾಡಬೇಕು. ಆಗಾದಾಗ ನಮ್ಮ ನಾಡು ಸಮೃದ್ಧಿಯಾಗುತ್ತದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಪ್ರಜೆಗಳ ಮೂಲಭೂತ ಕರ್ತವ್ಯವಾಗಿದೆ. ಪ್ರತಿಯೊಬ್ಬರು ತಮ್ಮ ಮನೆ, ಶಾಲೆ, ಕೆಲಸ ಮಾಡುವ ಕಡೆಗಳಲ್ಲಿ ಹೆಚ್ಚು ಗಿಡಗಳನ್ನು ಬೆಳೆಸುವುದರಿಂದ ಮುಂದಿನ ಪೀಳಿಗೆಯನ್ನು ಉಳಿಸಬಹುದಾಗಿದೆ ಎಂದರು.

ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ಕರ್ ಅಕ್ಷಯ್ ಅಶೋಕ್ ಮಾತನಾಡಿ, ಪ್ರಸ್ತುತ ಹಣ್ಣುಗಳ ಕಾಲವಾಗಿದ್ದು, ಮಾವಿನ ಹಣ್ಣು, ಹಲಸಿನ ಹಣ್ಣು ಹಾಗೂ ಇನ್ನಿತರೆ ಹಣ್ಣುಗಳನ್ನು ಮಕ್ಕಳು ತಿಂದ ಬಳಿಕ ಹಣ್ಣುಗಳಿ ಬೀಜಗಳನ್ನು ವ್ಯರ್ಥ ಮಾಡಬಾರದು. ಅದನ್ನು ಸಂಗ್ರಹಿಸಿ ಸೂಕ್ತ ಸ್ಥಳದಲ್ಲಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಬೀಜ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಪಿ.ಸಿ.ಶ್ರೀನಿವಾಸ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಬಿ.ಎಲ್.ಶಿವಪ್ರಸಾದ್, ರೈತ ನಾಯಕ ಮಹೇಶ್ ಪ್ರಭು, ಪರಿಸರ ಅಧಿಕಾರಿ ಸವಿತಾ ಹಾಗೂ ಇತರರು ಹಾಜರಿದ್ದರು.

ಗಿಡನೆಡುವ ಕಾರ್ಯಕ್ರಮ:

ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಿವಿಲ್ ನ್ಯಾಯಾಧೀಶರಾದ ಈಶ್ವರ್ ಅವರು ಗಿಡನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆ ಕಾರ್ಯಕ್ರಮದಲ್ಲಿ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಬಳಿಕ ರಾಜ್ಯ ಪರಿಸರ ಪ್ರಶಸ್ತಿ ವಿಜೇತರಾದ ಸಾಲುಮರದ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಪಾರ್ಯಕ್ರಮದಲ್ಲಿ ನೆರೆದ ಪ್ರತಿಯೊಬ್ಬರಿಗೂ ಬಟ್ಟೆ ಬ್ಯಾಗ್ ವಿತರಣೆ ಮಾಡುವ ಮೂಲಕ ಜಾಗೃತಿ ಮೂಡಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಮೌಲ್ಯಯುತವಾಗಿದೆ. ಚಂಡೀಗಢದಲ್ಲಿ ಮಕ್ಕಳನ್ನು ರಾಯಭಾರಿಗಳನ್ನಾಗಿ ಮಾಡುವ ಮೂಲಕ, ದೇಶದಲ್ಲೇ ಸ್ವಚ್ಛ ನಗರವಾಗಿ ಗುರುತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಮಕ್ಕಳು ಪರಿಸರ ಸಂರಕ್ಷಣೆ ಮಾಡುವ ಜತೆಗೆ ಪರಿಸರವನ್ನು ಹಾಳುಗೆಡುವವರನ್ನು ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

-ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ