ಜಿಲ್ಲೆ

ಕಾಡು ಪ್ರಾಣಿಗಳ ಬೇಟೆ ಹೆಚ್ಚಳ

ಹನೂರು: ತಾಲೂಕಿನ ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಆರು ತಿಂಗಳಿನಿಂದೀಚೆಗೆ ಕಾಡು ಪ್ರಾಣಿಗಳನ್ನು ಬೇಟೆಯಾಡುವವರ ಸಂಖ್ಯೆ ಹೆಚ್ಚಾಗಿದೆ. 7 ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಹಲವರು ಪರಾರಿಯಾಗಿದ್ದಾರೆ.

ಹನೂರು ತಾಲೂಕಿನಲ್ಲಿ ಬಿಆರ್‌ಟಿ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ವಿಭಾಗವಿದ್ದು, ಅರಣ್ಯ ಪ್ರದೇಶದೊಂದಿಗೆ ಬೆಸೆದುಕೊಂಡಿದೆ. ಇದರಲ್ಲಿ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮವು ತಾಲೂಕಿನಲ್ಲಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದ್ದು, ತಮಿಳುನಾಡಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದೆ.

ಈ ಹಿಂದೆ ಬೇಟೆಗಾರರು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದರ ಪರಿಣಾಮ ಕಾಡು ಪ್ರಾಣಿಗಳ ಬೇಟೆ ಕಡಿಮೆಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ, ಗಸ್ತು ನಡೆಸುವಲ್ಲಿ ನಿರ್ಲಕ್ಷ್ಯ, ಇನ್ನಿತರ ಕಾರಣಗಳಿಂದಾಗಿ ಕಾಡಿಗೆ ನುಸುಳುವವರ ಸಂಖ್ಯೆ ಹೆಚ್ಚಾಗಿದೆ. ಇದರ ಪರಿಣಾಮ ಕಾಡು ಪ್ರಾಣಿಗಳು ಬಲಿಯಾಗುತ್ತಿವೆ. ಸಿಬ್ಬಂದಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಿಣ್ಯಂ ಅರಣ್ಯ ಪ್ರದೇಶದಲ್ಲಿ ಐದು ಹುಲಿಗಳು ವಿಷ ಪ್ರಾಶನಕ್ಕೊಳಗಾಗಿ ಮೃತಪಟ್ಟಿರುವುದು ಸಹ ಇದಕ್ಕೆ ಸಾಕ್ಷಿಯಾಗಿದೆ.

ಕಳೆದ ಆರು ತಿಂಗಳಿನಿಂದೀಚೆಗೆ ವನ್ಯಪ್ರಾಣಿಗಳನ್ನು ಬೇಟೆಯಾಡಿದ್ದ 7 ಜನರನ್ನು ಬಂಧಿಸಲಾಗಿದೆ. ಜ.22 ರಂದು ಕಾಡು ಹಂದಿಯನ್ನು ಬೇಟೆಯಾಡಿ ಸಾಗಿಸುತ್ತಿದ್ದ ಅಜ್ಜೀಪುರ ಗ್ರಾಮದ ಪಳನಿಸ್ವಾಮಿ, ಏ.20 ರಂದು ಜಿಂಕೆಯನ್ನು ಬೇಟೆಯಾಡಿದ್ದ ರಾಮಾಪುರ ಗ್ರಾಮದ ಸುರೇಶ್, ಏ.22 ರಂದು ಗೋಪಿನಾಥಂ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿದ್ದ ಆಲಂಬಾಡಿ ಗ್ರಾಮದ ಪರಶಿವಮೂರ್ತಿ, ಮಾದೇಶ, ರಾಜು ಹಾಗೂ ಮೆಂದಾರೆ ಗ್ರಾಮದ ರಾಜು ಎಂಬುವರನ್ನು ಬಂಧಿಸಲಾಗಿತ್ತು. ಈ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಪರಾರಿಯಾಗಿದ್ದಾರೆ. ಕಳೆದ ತಿಂಗಳು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ತಿಮ್ಮರಾಯನ ಕೊಂಚಲು ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ದಾಳಿಗೆ ಚಿರತೆಯೊಂದು ಮೃತಪಟ್ಟಿತ್ತು.

ಜಿಂಕೆ ಬೇಟೆಯಾಡುವವರ ಸಂಖ್ಯೆ ಹೆಚ್ಚಳ: ಕಾಡು ಪ್ರಾಣಿಗಳ ಬೇಟೆ ಪ್ರಕರಣವನ್ನು ಅವಲೋಕಿಸಿದಾಗ ಜಿಂಕೆಯನ್ನು ಬೇಟೆಯಾಡುವವರ ಸಂಖ್ಯೆ ಹೆಚ್ಚಿದೆ. ಜಿಂಕೆ ಮಾಂಸ ಹಾಗೂ ಚರ್ಮಕ್ಕೆ ಭಾರಿ ಬೇಡಿಕೆ ಇದೆ. ಹಾಗಾಗಿ, ಜಿಂಕೆ ಬೇಟೆ ಹೆಚ್ಚಾಗಿದೆ ಎಂಬುದು ಈ ಭಾಗದ ಜನರ ಆರೋಪವಾಗಿದೆ. ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಆದರೆ, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಹೆಚ್ಚಿನ ನಿಗಾ ವಹಿಸುತ್ತಿಲ್ಲ. ಇದು ಆರೋಪಿಗಳು ಬೇಟೆಯಾಡುವುದನ್ನು ಮುಂದುವರಿಸುವುದಕ್ಕೆ ಎಡೆಮಾಡಿ ಕೊಟ್ಟಂತಾಗಿದೆ. ಇದರಿಂದ ಕಾಡು ಪ್ರಾಣಿಗಳು ಆಗಾಗ್ಗೆ ಬೇಟೆಗಾರರ ದಾಳಿಗೆ ಬಲಿಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಕಾಡು ಪ್ರಾಣಿಗಳ ಸಂಖ್ಯೆ ಕ್ಷೀಣಿಸಲಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು.

ಗಸ್ತು ನಡೆಸಬೇಕು: ಇತ್ತೀಚಿಗೆ ಮಿಣ್ಯಂ ಅರಣ್ಯ ಪ್ರದೇಶದಲ್ಲಿ ವಿಷಪ್ರಾಶನದಿಂದ ಐದು ಹುಲಿಗಳು ಮೃತಪಟ್ಟಿರುವುದು, ಬಿದರಹಳ್ಳಿ ಗಸ್ತಿನಲ್ಲಿ ಚಿರತೆ ಮೃತಪಟ್ಟಿರುವುದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿ ಸಮರ್ಪಕ ಗಸ್ತು ನಡೆಸಬೇಕು ಎಂದು ವನ್ಯಜೀವಿ ಪ್ರೇಮಿಗಳು ಒತ್ತಾಯಿಸಿದ್ದಾರೆ.