ಎನ್.ವೆಂಕಟೇಶ್
ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ನೀರು ಹರಿಸಲು ಸಾಧ್ಯವಾಗದೆ ಬೆಳೆ ಒಣಗುತ್ತಿರುವ ಸಂದರ್ಭದಲ್ಲಿ ಕಾಡು ಪ್ರಾಣಿಗಳು ಗ್ರಾಮಗಳತ್ತ ಮುಖ ಮಾಡಿದ್ದು, ಇವುಗಳಿಂದ ಸಲು ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ.
ಕಾಡಿನಲ್ಲಿ ನೀರಿನ ಅಭಾವದಿಂದ ಹಳ್ಳಿಗಳತ್ತ ಬಂದು ಹೋಗುತ್ತಿರುವ ಜಿಂಕೆಗಳು, ಬೆಳೆಗಳನ್ನು ತಿಂದು ಹಾಕುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ. ಇದರ ಜತೆಗೆ ಮೊಲಗಳು, ಕಾಡುಹಂದಿ, ನವಿಲುಗಳೂ ಸೇರಿಕೊಂಡು ಪ್ರತಿನಿತ್ಯ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ.
ಆವುಲಬೆಟ್ಟ, ಸ್ಕಂದಗಿರಿ, ನಂದಿಗಿರಿ, ವೀರದಿಮ್ಮಮ್ಮನ ಕಣಿವೆ, ಜಾಲಾರಿ ನರಸಿಂಹಸ್ವಾಮಿಬೆಟ್ಟ, ತಲಕಾಯಲಬೆಟ್ಟ ಸೇರಿ ಬೆಟ್ಟದ ತಪ್ಪಲು, ಅರಣ್ಯ ಪ್ರದೇಶದ ಗಡಿ ಭಾಗದಲ್ಲಿಯೇ ಇಂತಹ ಸಮಸ್ಯೆಗಳು ಅನ್ನದಾತರನ್ನು ಹೆಚ್ಚಾಗಿ ಕಾಡುತ್ತಿವೆ. ಕಣಜೇನಹಳ್ಳಿ, ಕೊಳವನಹಳ್ಳಿ, ಕೇತೇನಹಳ್ಳಿ, ಮಂಡಿಕಲ್ ಸೇರಿ ವಿವಿಧ ಗ್ರಾಮಗಳಲ್ಲಿ ಆಗಾಗ ಜಿಂಕೆಗಳು, ಕಾಡಹಂದಿ ಮತ್ತು ನವಿಲುಗಳು ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ಕೊಳವನಹಳ್ಳಿಯಲ್ಲಿ ಕಾಣಿಸಿಕೊಂಡ ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಸಾಯಿಸಿದ್ದವು.
ಬೆಳೆ ನಷ್ಟ ತಪ್ಪಿಸಿಕೊಳ್ಳಲು ಕಾಡು ಪ್ರಾಣಿಗಳನ್ನು ಓಡಿಸಲು ಯತ್ನಿಸಿ ಅವುಗಳಿಗೆ ಏನಾದರೂ ಆದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಸುಮ್ಮನಿದ್ದಲ್ಲಿ ಬೆಳೆಗಳು ಹಾಳಾಗುತ್ತವೆ. ಒಟ್ಟಿನಲ್ಲಿ ಇಕ್ಕಟ್ಟಿನ ಸ್ಥಿತಿಯಲ್ಲಿರುವ ರೈತರಿಗೆ ಬೆಳೆಯ ರಕ್ಷಣೆ ದೊಡ್ಡ ಸವಾಲಾಗಿದೆ.
ಸಂರಕ್ಷಣೆಗೆ ಇಡೀ ರಾತ್ರಿ ಕಾವಲು: ಹಿಂಗಾರು ಅವಧಿಯ ಬೆಳೆಗಳು, ಸಾಮಾನ್ಯವಾಗಿ ಬೆಳೆದ ಹೂವು, ಹಣ್ಣು ತರಕಾರಿ ಬೆಳೆಗಳು ಫಸಲು ಕೊಡುತ್ತಿವೆ. ಉತ್ತಮ ಬೆಲೆಗೆ ಮಾರುವ ನಿಟ್ಟಿನಲ್ಲಿ ರೈತರು ಮುಂದಾಗುತ್ತಿರುವುದರ ನಡುವೆ ಹಲವು ಸಮಸ್ಯೆಗಳ ಜತೆಗೆ ಕಾಡು ಪ್ರಾಣಿಗಳಿಂದ ಉತ್ಪನ್ನಗಳನ್ನು ರಕ್ಷಿಸಿಕೊಳ್ಳಲು ಇಡೀ ರಾತ್ರಿ ಕಾವಲು ಕಾಯುವಂತಾಗಿದೆ. ಆದರೆ, ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಬೆಳೆ ಹಾಳಾಗುವುದು ಮಾತ್ರ ತಪ್ಪುತ್ತಿಲ್ಲ. ಹಿಪ್ಪು ನೇರಳೆ, ಹಣ್ಣು, ತರಕಾರಿ ಸೇರಿ ವಿವಿಧ ಬೆಳೆಗಳನ್ನು ಅರಣ್ಯದಿಂದ ಬಂದ ಮೂಕಜೀವಿಗಳು ಅರ್ಧಂಬರ್ಧ ತಿಂದು ಹಾಕುತ್ತಿವೆ. ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಬೆಟ್ಟ-ಗುಡ್ಡ, ಕಾಡಿನಲ್ಲಿನ ಮರಗಳು, ಹುಲ್ಲು ಒಣಗಿದೆ. ನೀರಿನ ಸೆಲೆಗಳು ಬತ್ತಿವೆ. ಇದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಿರುವ ಪ್ರಾಣಿ-ಪಕ್ಷಿಗಳು ಎಲ್ಲಿ ಹಸಿರು ಕಾಣಿತ್ತದೊ ಅಲ್ಲಿಗೆ ಲಗ್ಗೆ ಇಡುತ್ತಿವೆ.
ತ್ರಿಶಂಕು ಸ್ಥಿತಿಯಲ್ಲಿ ರೈತರು: ಆಗಾಗ ಕಾಡು ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳ ಬೇಟೆಯ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಟ್ಟ ಗುಡ್ಡ ಮತ್ತು ಅರಣ್ಯ ತಪ್ಪಲಿನ ಪ್ರದೇಶದಲ್ಲಿನ ಜನರ ಮೇಲೆ ನಿಗಾ ವಹಿಸಿದ್ದಾರೆ. ಜತೆಗೆ ಮೂಕ ಜೀವಿಗಳನ್ನು ಕೊಲ್ಲುವ ಇಲ್ಲವೇ ಹಿಂಸಿಸುವ ಕೆಲಸದಲ್ಲಿ ತೊಡಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಜಿಂಕೆ, ನವಿಲು ವಿಚಾರದಲ್ಲಿ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
7 ನವಿಲು ಸಾವು, ವಿಷ ಪತ್ತೆಗೆ ತನಿಖೆ: ಇತ್ತೀಚೆಗೆ ಶಿಡ್ಲಘಟ್ಟ ತಾಲೂಕಿನ ಬೈರಗಾನಹಳ್ಳಿಯಲ್ಲಿನ ಜಮೀನೊಂದರಲ್ಲಿ ಅನುಮಾನಾಸ್ಪದ ರೀತಿಯಲ್ಲಿ 7 ನವಿಲುಗಳು ಮೃತಪಟ್ಟಿದ್ದವು. ಮೇಲ್ನೋಟಕ್ಕೆ ವಿಷ ಪದಾರ್ಥ ಸೇವಿಸಿ ಮೃತಪಟ್ಟಿವೆ ಎಂಬುದು ತಿಳಿದು ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕ್ರಿಮಿನಾಶಕ ಮತ್ತು ವಿಷಕಾರಿ ರಸಗೊಬ್ಬರ ತಿನ್ನುವ ಪದಾರ್ಥಗಳಿಗೆ ಹಾಕಲಾಗಿತ್ತು. ನವಿಲುಗಳ ಮರಣೋತ್ತರ ಪರೀಕ್ಷೆ ನಡೆಸಿ, ಯಾವ ವಿಷದ ಅಂಶ ಇತ್ತು? ಯಾರು ಹಾಕಿದ್ದಾರೆ ಎಂಬುದರ ಮೇಲೆ ತನಿಖೆ ನಡೆಸಲಾಗುತ್ತಿದೆ.
ಶಿಡ್ಲಘಟ್ಟ ತಾಲೂಕಿನಲ್ಲಿ 7 ನವಿಲುಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಕಾಡು ಪ್ರಾಣಿಗಳಿಂದ ಬೆಳೆಗಳು ನಾಶವಾಗುತ್ತಿರುವುದರ ಬಗ್ಗೆ ವ್ಯಾಪಕವಾಗಿ ದೂರುಗಳು ಕೇಳಿ ಬರುತ್ತಿವೆ. ಇದರಲ್ಲಿ ವಾಸ್ತವಾಂಶವಿದ್ದಲ್ಲಿ ದಾಖಲೆಗಳನ್ನು ಪರಿಶೀಲಿಸಿ ನಿಯಮಾನುಸಾರ ಪರಿಹಾರ ಕೊಡುತ್ತೇವೆ. ಅರಸಲನ್, ಉಪ ಅರಣ್ಯಸಂರಕ್ಷಣಾಧಿಕಾರಿ, ಚಿಕ್ಕಬಳ್ಳಾಪುರ ******* ಕಣಜೇನಹಳ್ಳಿ, ನಂದಿ ಸಮೀಪ ನವಿಲು, ಜಿಂಕೆಗಳ ಕಾಟ ಹೆಚ್ಚಾಗಿದೆ. ಅರ್ಧಂಬರ್ಧ ಬೆಳೆಗಳನ್ನು ತಿಂದು ಹಾಕುತ್ತಿರುವುದರಿಂದ ನಷ್ಟ ಉಂಟಾಗುತ್ತಿದೆ. ಇದನ್ನು ಗಮನಕ್ಕೆ ತಂದಾಗ, ಪ್ರಾಣಿಗಳಿಗೆ ಹಿಂಸೆ ಕೊಡದೆ ಸ್ವಯಂ ಬೆಳೆ ಉಳಿಸಿಕೊಳ್ಳಬೇಕು ಎಂದು ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಯಲುವಹಳ್ಳಿ ಮಂಜುನಾಥ್, ರೈತ