ಬಾಳೆಹೊನ್ನೂರು: ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಸಮೀಪದ ಹೊನ್ನೇಕೊಪ್ಪ ಗ್ರಾಮದ ಕಾಡಿನಲ್ಲಿ ಅರಣ್ಯ ಇಲಾಖೆ ನಿರ್ಮಿಸಿದ್ದ ಬೃಹತ್ ಕೆರೆ ಒಡೆದು ಕಾಫಿ ತೋಟಕ್ಕೆ ಹಾನಿಯಾಗಿದೆ.
ಕೆರೆ ಒಡೆದು ನೀರು ಹರಿದು ಬಂದಿದ್ದರಿಂದ ಹೊನ್ನೇಕೊಪ್ಪದ ವಿಠ್ಠಲ್ ರೈ ಎಂಬುವರ ಕಾಫಿ ತೋಟಕ್ಕೆ ಹಾನಿಯಾಗಿದೆ. ಹೊನ್ನೇಕೊಪ್ಪ ಗ್ರಾಮದ ಅರಣ್ಯ ಪ್ರದೇಶದಲ್ಲಿ ಒಂದೂವರೆ ವರ್ಷದ ಹಿಂದೆ ಅರಣ್ಯ ಇಲಾಖೆಯಿಂದ ಒಂದು ಎಕರೆಗೂ ಹೆಚ್ಚು ವಿಸ್ತೀರ್ಣದ ಕೆರೆಯನ್ನು ಕಾಡು ಪ್ರಾಣಿಗಳು ನೀರು ಕುಡಿಯಲೆಂದು ನಿರ್ಮಿಸಿದ್ದರು. ಈ ಬಾರಿ ಅವಧಿಗೆ ಮುನ್ನವೇ ಮಲೆನಾಡು ಭಾಗದಲ್ಲಿ ಮಳೆ ಆರಂಭಗೊಂಡಿದ್ದು, ಕೆಲ ತಿಂಗಳ ಹಿಂದೆಯೇ ಕೆರೆ ನೀರಿನಿಂದ ತುಂಬಿತ್ತು. ಎರಡ್ಮೂರು ತಿಂಗಳಿನಿಂದಲೂ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಕೆರೆಯಲ್ಲಿ ನೀರು ಹೆಚ್ಚಾಗಿ ಹೊರ ಹೋಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಲ್ಲದೇ ಕೆರೆ ತೂಬಿಗೆ ಕಸ, ಕಡ್ಡಿ ಕಟ್ಟಿದ್ದರಿಂದ ನೀರು ಹೊರ ಹೋಗುತ್ತಿರಲಿಲ್ಲ.
ಮಂಗಳವಾರ ರಾತ್ರಿ ಹತ್ತು ಗಂಟೆ ವೇಳೆಗೆ ದಿಢೀರಾಗಿ ಕೆರೆ ದಂಡೆ ಒಡೆದಿದ್ದು, ಕೆರೆಯಲ್ಲಿದ್ದ ಸಂಪೂರ್ಣ ನೀರು ಸಮೀಪದ ವಿಠ್ಠಲ್ ರೈ ಅವರ ತೋಟಕ್ಕೆ ನುಗ್ಗಿದೆ. ಇದರಿಂದ ತೋಟ ಜಲಾವೃತಗೊಂಡಿತು. ನೀರು ಹರಿಯುವ ರಭಸಕ್ಕೆ ಕೆರೆ ಸುತ್ತಲಿನ ದೊಡ್ಡ ದೊಡ್ಡ ಗಾತ್ರದ ಹತ್ತಾರು ಲೋಡುಗಳಷ್ಟು ಕಲ್ಲಿನ ರಾಶಿ ಸಹ ತೋಟದೊಳಗೆ ಬಂದು ಬಿದ್ದಿವೆ. ನೀರು ಹರಿದಿರುವ ಜಾಗದಲ್ಲಿ ದೊಡ್ಡ ಹೊಂಡಗಳಾಗಿ ಕಾಫಿ ಗಿಡಗಳು ಬುಡ ಸಮೇತ ಕಿತ್ತು ಹಾನಿಯಾಗಿದೆ. ಬುಧವಾರ ಬೆಳಗ್ಗೆ ತೋಟ ಜಲಾವೃತಗೊಂಡಿರುವುದನ್ನು ನೋಡಿದ ವಿಠ್ಠಲ್ ರೈ ಆತಂಕಗೊಂಡಿದ್ದಾರೆ.