ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕಾಡಾನೆಯೊಂದಿಗೆ ಪ್ರಯಾಣಿಕ ಸೆಲ್ಫಿ ಕ್ಲಿಕ್ಕಿಸುತ್ತಿರುವುದು. 
ಜಿಲ್ಲೆ

ಕಾಡಾನೆಯೊಂದಿಗೆ ಸೆಲ್ಫಿ ಕ್ಲಿಕ್ಕಿಸುವ ದುಸ್ಸಾಹಸ

ಮೂಡಿಗೆರೆ: ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಗುರುವಾರದಿಂದ ಕಾಣಿಸಿಕೊಂಡಿರುವ ಒಂಟಿ ಕಾಡಾನೆ ಜತೆ ಪ್ರಯಾಣಿಕರು ಸೆಲ್ಫಿ ತೆಗೆಯಲು ನಾ ಮುಂದು ತಾ ಮುಂದು ಎಂಬಂತೆ ಪೈಪೋಟಿಗಿಳಿದಾಗ, ಕಾಡಾನೆ ಘೀಳಿಟ್ಟು ಓಡಿಸಿದೆ.

ರಸ್ತೆಯಲ್ಲಿ ನಿಂತಿದ್ದ ಕಾಡಾನೆಯನ್ನು ನೋಡಿದ ಪ್ರಯಾಣಿಕರು ವಾಹನವನ್ನು ನಿಲ್ಲಿಸಿ ರಸ್ತೆಗಳಿದು ಸೆಲ್ಫಿ ತೆಗೆದುಕೊಳ್ಳಲು ಕಾಡಾನೆ ಸಮೀಪಕ್ಕೆ ತೆರಳಿದ್ದಾರೆ. ಆಗ ಕೋಪಗೊಂಡ ಕಾಡಾನೆ ಒಮ್ಮೆಲೆ ಘೀಳಿಡತೊಡಗಿತು. ಇದರಿಂದ ಕಂಗಾಲದ ಪ್ರಯಾಣಿಕರು ಓಡಿ ಹೋಗಿ ವಾಹನಕ್ಕೆ ಹತ್ತಿಕೊಂಡರು. ಕಾಡಾನೆ ರಸ್ತೆಯಲ್ಲಿದ್ದಿದರಿಂದ ಗುರುವಾರ ಒಂದು ಗಂಟೆಗೂ ಹೆಚ್ಚು ಕಾಲ ಘಾಟ್ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತು. ಕಾಡಾನೆ ಯಾರಿಗೂ ತೊಂದರೆ ಉಂಟುಮಾಡಲಿಲ್ಲ.

6 ತಿಂಗಳಿನಿಂದ ಒಂಟಿ ಕಾಡಾನೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದೆ. ಸುದ್ದಿ ತಿಳಿದೊಡನೆ ಮೂಡಿಗೆರೆ ಮತ್ತು ಬೆಳ್ತಂಗಡಿ ವಲಯದ ಕಾಡಾನೆ ಟಾಸ್ಕ್ ಫೋರ್ಸ್ ಸಿಬ್ಬಂದಿ, ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಧಾವಿಸಿ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟುತ್ತಾರೆ. ಟಾಸ್ಕ್ ಫೋರ್ಸ್ ಸಿಬ್ಬಂದಿ ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಿದರೆ ಇನ್ನೊಂದು ಕಡೆ ಅರಣ್ಯದಿಂದ ಮತ್ತೆ ರಸ್ತೆಗೆ ಬರುತ್ತದೆ. ಕಾಡಾನೆಯಿರುವ ಬಗ್ಗೆ ಅರಣ್ಯ ಇಲಾಖೆಯಿಂದ ಪ್ರಯಾಣಿಕರಿಗೆ ಮಾಹಿತಿ ನೀಡುವ ಸಲುವಾಗಿ ಘಾಟ್ ಪ್ರದೇಶದ ರಸ್ತೆಯ ಅಲ್ಲಲ್ಲಿ ಬ್ಯಾನರ್‌ಗಳನ್ನು ಕಟ್ಟಲಾಗಿದೆ. ಕಾಡಾನೆ ಕಾಟದಿಂದ ಕೆಲವರು ವಾಹನವನ್ನು ತಿರುಗಿಸಿಕೊಂಡು ಬಂದ ದಾರಿಯಲ್ಲಿ ವಾಪಸಾಗುತ್ತಾರೆ. ಇನ್ನು ಕೆಲವರು ಶಿರಾಡಿ ಘಾಟ್ ಮೂಲಕ ಮಂಗಳೂರಿನತ್ತ ಸಾಗುತ್ತಾರೆ.

ಗುರುವಾರ ದಿಢೀರ್ ಎಂಬಂತೆ ಹೆದ್ದಾರಿಯ ಕಡಿದಾದ ತಿರುವಿನಲ್ಲಿ ಕಾಣಿಸಿಕೊಂಡ ಕಾಡಾನೆಯೊಂದಿಗೆ ಪ್ರಯಾಣಿಕರು ಸೆಲ್ಫಿ ಕ್ಲಿಕ್ಕಿಸಿದ್ದು ಸರಿಯಲ್ಲ ಎಂದು ಪರಿಸರ ತಜ್ಞರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ವನ್ಯಜೀವಿಗಳು ಮಾನವ ಸಂಪರ್ಕದಿಂದ ಒತ್ತಡಕ್ಕೆ ಒಳಗಾಗುತ್ತವೆ. ಸೆಲ್ಫಿ ತೆಗೆಯುವ ವರ್ತನೆಯಿಂದ ದುರಂತಗಳಿಗೆ ದಾರಿಯಾಗಬಹುದು. ಕಾಡಾನೆ ಕಂಡೊಡನೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ವಾಹನದಿಂದ ಇಳಿದು ಕಾಡಾನೆ ಬಳಿಗೆ ತೆರಳಿ ಸೆಲ್ಫಿ ತೆಗೆಯುವ ದುಸ್ಸಾಹಸಕ್ಕಿಳಿದರೆ ದುರಂತಗಳಿಗೆ ದಾರಿಯಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.