ಶೃಂಗೇರಿ: ಬೇಗಾರ್ ಗ್ರಾಮ ಪಂಚಾಯಿತಿ ಕೆ.ಮಸಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ತಾರೊಳ್ಳಿಕೊಡಿಗೆಯಲ್ಲಿ ಹತ್ತು ವರ್ಷಗಳಿಂದ ಕಾಡಾನೆಗಳು ಸಂಚರಿಸುತ್ತಿದ್ದು, ಇದರಿಂದ ಈ ಭಾಗದ ರೈತರು ಆತಂಕದಲ್ಲಿದ್ದಾರೆ. ಶಾರ್ಪ್ ಶೂಟರ್‌ಗಳನ್ನು ಕರೆಸಿ ಆನೆಗಳನ್ನು ಸೆರೆಹಿಡಿಯಬೇಕು ಎಂದು ಗ್ರಾಪಂ ಉಪಾಧ್ಯಕ್ಷ ಅಣ್ಕುಳಿ ಲಕ್ಷ್ಮೀಶ ಆಗ್ರಹಿಸಿದರು.
ಶೃಂಗೇರಿಯ ಅರಣ್ಯ ಇಲಾಖೆ ಮತ್ತು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ತಂಡ ತಾರೊಳ್ಳಿಕೊಡಿಗೆ ಗಿರಿಜನರ ಕುಂದುಕೊರತೆ ವಿಚಾರಣೆಗೆ ಗುರುವಾರ ಭೇಟಿ ನೀಡಿದಾಗ ಅವರು ಸಮಸ್ಯೆ ಹೇಳಿಕೊಂಡರು.
ಸ್ಥಳೀಯವಾಗಿ ಹೆಚ್ಚಾಗಿ ಕಾರ್ಮಿಕರು, ಅತಿಸಣ್ಣ ರೈತರು ಮತ್ತು ಗಿರಿಜನರು ವಾಸಿಸುತ್ತಿದ್ದು, ಕಾಡಾನೆಗಳ ಕಾಟದಿಂದ ಭಯದಲ್ಲಿ ಬದುಕುತ್ತಿದ್ದಾರೆ. ಅತಿವೃಷ್ಟಿಯಿಂದ ಬೆಳೆಗಳು ನಾಶವಾಗಿ ಉಳಿದ ಬೆಳೆಯನ್ನು ಉಳಿಸಲು ಶ್ರಮ ಪಡುತ್ತಿರುವ ಸಂದರ್ಭದಲ್ಲಿ ಕಾಡಾನೆಗಳ ಉಪಟಳದಿಂದ ಬೆಳೆ ನಾಶವಾಗಿದೆ. ಕೂಡಲೇ ಕಾಡಾನೆಗಳನ್ನು ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಭಾಸ್ಕರ್ ನಾಯ್ಕ ಮಾತನಾಡಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅರಣ್ಯದ ಅಂಚಿನಲ್ಲಿರುವ ವಾಸಿಸುವ ಗಿರಿಜನರು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಇವರನ್ನು ಮುಖ್ಯವಾಹಿನಿಯಿಂದ ದೂರವಿಟ್ಟಿದೆ. ಇದರ ಪರಿಣಾಮವಾಗಿ ಇವರಿಗೆ ಶಿಕ್ಷಣದ ಹಕ್ಕು ಪೂರ್ಣ ಪ್ರಮಾಣದಲ್ಲಿ ಲಭ್ಯವಿಲ್ಲ ಎಂದು ದೂರಿದರು.
ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಗಿರಿಜನರಿಗೆ ಹಕ್ಕುಪತ್ರಗಳ ಕೊರತೆ ಪ್ರಮುಖ ಸಮಸ್ಯೆಯಾಗಿದೆ. ನಾವು ವಾಸಿಸುವ ಭೂಮಿಗೆ ಕಾನೂನುಬದ್ಧ ದಾಖಲೆಗಳು ಇಲ್ಲ. ಕೃಷಿ ಮತ್ತು ವಸತಿ ಹಕ್ಕುಗಳಿಂದ ವಂಚಿತರಾಗಿದ್ದೇವೆ. ಹಕ್ಕುಪತ್ರಗಳಿಲ್ಲದೆ ನಮಗೆ ಸರ್ಕಾರದ ಕಲ್ಯಾಣ ಯೋಜನೆಗಳು, ಕೃಷಿ ಸಾಲಗಳು ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯ ನಿಯಮಗಳಿಂದ ನಮ್ಮ ಸಾಂಪ್ರದಾಯಿಕ ಕೃಷಿ ಪದ್ಧತಿ ಮತ್ತು ಜೀವನೋಪಾಯದ ಮಾರ್ಗಗಳಿಗೆ ಅಡ್ಡಿಯುಂಟಾಗಿದೆ. ಇದು ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಇದರ ಪರಿಣಾಮವಾಗಿ ನಾವು ಅತಂತ್ರ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ ಎಂದರು.
ವಲಯ ಅರಣ್ಯಾಧಿಕಾರಿ ಮಧುಕರ್, ಕೆರೆಕಟ್ಟೆ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಅನಿಲ್‌ಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿ ಶ್ರುತಿ, ಸುನೀಲ್, ಗ್ರಾಪಂ ಸದಸ್ಯ ಕೇಶವ, ಸ್ಥಳೀಯ ನಿವಾಸಿಗಳಾದ ರವೀಂದ್ರ, ಶ್ರೀನಿವಾಸ, ರೇವಣ್ಣ, ರಾಮಪ್ಪ ಇದ್ದರು.
ತಾರೊಳ್ಳಿಕೊಡಿಗೆ ಪ್ರದೇಶ ದಟ್ಟವಾದ ಕಾಡು ಮತ್ತು ಗುಡ್ಡಗಾಡುಗಳಿಂದ ಕೂಡಿದ್ದು, ಕಾಡಾನೆಗಳನ್ನು ಸೆರೆ ಹಿಡಿಯಲು ತಾಂತ್ರಿಕ ದೋಷ ಅಡ್ಡಿಯಾಗುತ್ತದೆ. ಕಾಡಾನೆಗಳ ಉಪಟಳ ತಡೆಯಲು ರೈತರ ಜಮೀನಿನ ಸುತ್ತ ಆನೆ ತಡೆ ಕಂದಕಗಳನ್ನು ಮತ್ತು ಸೋಲಾರ್ ಬೇಲಿಗಳನ್ನು ನಿರ್ಮಿಸುತ್ತೇವೆ. ಇಲ್ಲಿರುವ ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ನೀಡಿದ ಹಕ್ಕುಪತ್ರಗಳಿಗೆ ಸಂಬಂಧಿಸಿದಂತೆ ಪಹಣಿ ಕಾಲಂ 11ರಲ್ಲಿ ನಮೂದು ಮಾಡುವ ಕುರಿತು ಕಂದಾಯ ಇಲಾಖೆ ಜತೆಗೆ ಚರ್ಚಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಕೊಪ್ಪ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಇ.ಶಿವಶಂಕರ್ ಭರವಸೆ ನೀಡಿದರು.