ಮೂಡಿಗೆರೆ: ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಕಾಡಾನೆಗಳನ್ನು ಅಟ್ಟುವುದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ. ಮೂರೂ ಜಿಲ್ಲೆಗಳನ್ನೊಳಗೊಂಡು ಒಂದೇ ಕಾರ್ಯಪಡೆ ರಚಿಸಿ ಕಾಡಾನೆಗಳನ್ನು ನಾಗರಹೊಳೆ ಅಥವಾ ಭದ್ರಾ ಅಭಯಾರಣ್ಯಕ್ಕೆ ಅಟ್ಟಲು ಯೋಜನೆ ರೂಪಿಸಲಾಗಿದೆ. ಸದ್ಯದಲ್ಲೇ ಕಾರ್ಯಾಚರಣೆ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಮುಖ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ್ ತಿಳಿಸಿದರು.
ಶಾಸಕಿ ನಯನಾ ಮೋಟಮ್ಮ ಅವರ ನಿರ್ದೇಶನದಂತೆ ಬುಧವಾರ ಪಟ್ಟಣಕ್ಕೆ ಭೇಟಿ ನೀಡಿ ರೈತ ಮುಖಂಡರಿಂದ ಅಹವಾಲು ಆಲಿಸಿ ಮಾತನಾಡಿ, ತಕ್ಷಣಕ್ಕೆ ಮೂಡಿಗೆರೆ ಭಾಗದಲ್ಲಿರುವ ಕಾಡಾನೆ ತಂಡಗಳ ಸಂಚಾರ ಅನುಸರಿಸಿ ಬೇರೆಡೆಗೆ ಅಟ್ಟಲಾಗುವುದು. ಜನವಸತಿ ಪ್ರದೇಶಗಳಿಗೆ ಬರುತ್ತಿರುವ ಕಾಡುಕೋಣಗಳನ್ನು ಸೆರೆಹಿಡಿದು ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಯೋಜನೆ ರೂಪಿಸಲಾಗಿದೆ. ಮಧ್ಯಪ್ರದೇಶದಲ್ಲಿ ಕೈಗೊಂಡಿರುವ ಕ್ರಮಗಳನ್ನು ಅಧ್ಯಯನ ಮಾಡಲಾಗಿದೆ. ರಾಜ್ಯದಲ್ಲಿ ಅರಣ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಸದ್ಯದಲ್ಲೇ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.
ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಮಾತನಾಡಿ, ತಾಲೂಕಿನಲ್ಲಿ 40ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿವೆ. ಮಾಕೋನಹಳ್ಳಿ, ನಂದೀಪುರ, ಹಳೇಮೂಡಿಗೆರೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಪಾರ ನಷ್ಟ ಉಂಟುಮಾಡುತ್ತಿವೆ. ಮಂಗಳವಾರ ರಾತ್ರಿ ಕಾಡಾನೆಗಳು ಕೃಷ್ಣಾಪುರ ಗ್ರಾಮಕ್ಕೆ ಲಗ್ಗೆಯಿಟ್ಟು ಒಬ್ಬರನ್ನು ಸೊಂಡಿಲಿನಿಂದ ಎತ್ತಿಎಸೆದು ಗಾಯಗೊಳಿಸಿದೆ. ಕುನ್ನಹಳ್ಳಿ, ಹಳಸೆ, ಕಾರಬೈಲ್, ಮಾಕೋನಹಳ್ಳಿ, ನಂದೀಪುರ, ಜಿ.ಹೊಸಳ್ಳಿ, ಗೋಣಿಬೀಡು, ಕಸ್ಕೇಬೈಲ್, ಕಲ್ಲುಗುಡ್ಡ, ಕಮ್ಮರಗೋಡು, ಚಂದ್ರಾಪುರ ಗ್ರಾಮದ ಸುತ್ತಾಮುತ್ತ ಒಂದು ವರ್ಷದಿಂದ ಮೂರ್ನಾಲ್ಕು ಗುಂಪಿನಲ್ಲಿ ತಿರುಗಾಡಿಕೊಂಡು ಬೆಳೆನಾಶ ಮಾಡುತ್ತಿವೆ. ದಾರಿಯಲ್ಲಿ ಸಿಕ್ಕವರನ್ನು ಹೊಸಕಿ ಹಾಕುತ್ತಿವೆೆ. ಕಾಡಾನೆಗಳ ದಾಳಿಯಿಂದ ಕಾಫಿ ತೋಟಗಳು ನಾಶವಾಗಿವೆ ಎಂದರು.
ಕಾಡುಕೋಣಗಳು ಕೂಡ ಹಿಂಡುಹಿಂಡಾಗಿ ತೋಟಗಳಿಗೆ ಲಗ್ಗೆಯಿಡುತ್ತಿವೆ. ಬಾಳೂರು ಹೋಬಳಿಯಲ್ಲಿ ಕಳೆದ ತಿಂಗಳು ರೈತನನ್ನು ಕಾಡುಕೋಣ ತಿವಿದು ಸಾಯಿಸಿದೆ. ರೈತರು ತೋಟಗಳಿಗೆ ಹೋಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಡಿಸಿಎಫ್ ರಮೇಶ್ ಬಾಬು ರೈತರಿಗೆ ಮಾಹಿತಿ ನೀಡಿದರು. ವಲಯ ಅರಣ್ಯಾಧಿಕಾರಿ ಕಾವ್ಯಾ ಕಾರ್ಯಾಚರಣೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.
ಕೋಮಾರ್ಕ್ ಮಾಜಿ ಅಧ್ಯಕ್ಷ ಡಿ.ಎಸ್.ರಘು, ಮಾಕೋನಹಳ್ಳಿ ಸಹಕಾರ ಸಂಘದ ಅಧ್ಯಕ್ಷ ಎಂ.ಎನ್.ಅಶ್ವತ್ಥ್, ಬೆಳೆಗಾರರ ಸಂಘಧ ಕಾರ್ಯದರ್ಶಿ ಮನೋಹರ್, ಸಂದೀಪ್, ಪ್ರಹ್ಲಾದ್, ರತನ್ ಊರುಬಗೆ, ನಯನ ತಳವಾರ ಇತರರಿದ್ದರು.