ಜಿಲ್ಲೆ

ಕಾಡಾನೆಗಳ ನಿಯಂತ್ರಣಕ್ಕೆ ಆಗ್ರಹಿಸಿ ಪ್ರತಿಭಟನೆ

ನಂಜನಗೂಡು: ಹಂಚಿಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಕಡಿವಾಣ ಹಾಕುವಂತೆ ಆಗ್ರಹಿಸಿ ಹಂಚಿಪುರ ಗ್ರಾಮಸ್ಥರು ಕೈಯಲ್ಲಿ ಕ್ರಿಮಿನಾಶಕ ಬಾಟಲಿಗಳನ್ನು ಹಿಡಿದು ಬುಧವಾರ ಪ್ರತಿಭಟನೆ ನಡೆಸಿದರು.

ಓಂಕಾರ್ ಅರಣ್ಯ ಪ್ರದೇಶದ ಕಚೇರಿ ಮುಂದೆ ಸೇರಿದ ಗ್ರಾಮಸ್ಥರು, ಓಂಕಾರ್ ಅರಣ್ಯ ಪ್ರದೇಶ, ನಂಜನಗೂಡು ಅರಣ್ಯ ಪ್ರದೇಶ ವ್ಯಾಪ್ತಿಗೆ ಜಮೀನುಗಳಲ್ಲಿ ದಿನನಿತ್ಯ ಕಾಡು ಪ್ರಾಣಿಗಳು ಮತ್ತು ಕಾಡಾನೆಗಳ ಹಾವಳಿ ನಿರಂತರವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷೃ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಕಾಡಾನೆಗಳು ಜಮೀನಿಗೆ ಲಗ್ಗೆ ಇಟ್ಟ ಸಂದರ್ಭದಲ್ಲಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಲು ತಡ ಮಾಡುತ್ತಾರೆ. ಇದರ ಜತೆಗೆ ನಿರ್ಲಕ್ಷೃದ ಮಾತುಗಳನ್ನು ಆಡುತ್ತಾರೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಮುಖಂಡ ಕೆಂಪಣ್ಣ ಮಾತನಾಡಿ, ಹಂಚಿಪುರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳ ಕಾಟ ಮಿತಿಮೀರಿದೆ. ಕೈಗೆ ಫಸಲು ಬರುವಷ್ಟರಲ್ಲಿ ಕಾಡಾನೆಗಳ ಪಾಲಾಗುತ್ತಿವೆ. ಆನೆಗಳು ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಅರಣ್ಯ ಇಲಾಖೆಗೆ ಕರೆ ಮಾಡಿದರೆ ತಕ್ಷಣ ಸ್ಪಂದಿಸುವುದಿಲ್ಲ. ಇಲಾಖೆಯಿಂದ ತಕ್ಷಣದಲ್ಲಿ ಪರಿಹಾರ ಸಿಗುವುದಿಲ್ಲ ಎಂದು ದೂರಿದರು.

ಪ್ರತಿಭಟನೆ ಸ್ಥಳಕ್ಕೆ ವಲಯ ಅರಣ್ಯ ಅಧಿಕಾರಿ ಸತೀಶ್ ಭೇಟಿ ನೀಡಿ ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ರೈತರು ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದರು. ಕೊನೆಗೆ ದೂರವಾಣಿ ಕರೆ ಮಾಡಿ ವಲಯ ಅರಣ್ಯ ಅಧಿಕಾರಿ ಕಾಡಾನೆಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮವಹಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಅಂತ್ಯಗೊಳಿಸಿದರು.

ಮಹದೇವಸ್ವಾಮಿ, ಜಗದೀಶ್ ಪಟೇಲ್, ನಂದೀಶ್, ವಸಂತ್ ಕುಮಾರ್, ಮಂಜುನಾಥ್, ಚನ್ನಕೇಶವ, ಲೋಕೇಶ್, ಪಾಂಡು, ಮಂಜುಪಟೇಲ್, ಮಹೇಶ್, ರಘು, ಸಿದ್ದರಾಜು, ಹಸುಗೂನಿ ಮಹೇಶ್, ಮಂಚಳ್ಳಿ, ಕುರುಬೂರು ಹುಂಡಿ, ಕೊತ್ತನಹಳ್ಳಿ ಗ್ರಾಮಸ್ಥರು ಹಾಜರಿದ್ದರು.