ಜಿಲ್ಲೆ

ಕಾಡಾನೆಗಳ ದಾಳಿಗೆ ಭತ್ತದ ಬೆಳೆ ನಾಶ

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವನಸಮುದ್ರ ಗ್ರಾಮದ ಮಯೂರ ಹೋಟೆಲ್ ಹಿಂಭಾಗವಿರುವ ಜಮೀನುಗಳಿಗೆ ಕಾಡಾನೆ ಹಿಂಡು ದಾಳಿ ನಡೆಸಿ ಭತ್ತದ ಬೆಳೆ ನಾಶ ಮಾಡಿವೆ.

ಎರಡು ದಿನಗಳಿಂದ 8ರಿಂದ 10 ಕಾಡಾನೆಗಳು ಜಮೀನುಗಳಿಗೆ ಲಗ್ಗೆ ಹಾಕಿ ಒಂದೂವರೆ ತಿಂಗಳ ಹಿಂದಷ್ಟೇ ನಾಟಿ ಮಾಡಿದ್ದ ಭತ್ತದ ಸಸಿಯನ್ನು ತಿಂದು ತುಳಿದು ಹಾಳು ಮಾಡಿವೆ. ಸುಮಾರು 30 ಕ್ಕೂ ಎಚ್ಚು ಎಕರೆ ಪ್ರದೇಶದ ಭತ್ತದ ಪೈರು ನಾಶವಾಗಿದೆ. ಪುಟ್ಟರಾಜು, ಮುತ್ತಯ್ಯ, ದೊರೈರಾಜು, ಲಿಂಗರಾಜು, ಪ್ರಸಾದ್, ಸುರೇಶ್, ಸಿದ್ದಪ್ಪಾಜಿ, ಮಹದೇವ, ಜಯಪಾಲ, ಮಹೇಂದ್ರ ಸೇರಿದಂತೆ ಇನ್ನಿತರ ರೈತರ ಜಮೀನುಗಳಿಗೆ ನುಗ್ಗಿದ ಕಾಡಾನೆಗಳು ಬೆಳೆ ಹಾನಿ ಮಾಡಿವೆ. ಬೂದಗಟ್ಟೆ ದೊಡ್ಡಿ ಹಾಗೂ ಭರಚುಕ್ಕಿ ಅರಣ್ಯ ಪ್ರದೇಶದಿಂದ ಬರುತ್ತಿರುವ ಕಾಡಾನೆಗಳು ಬೆಳೆ ಹಾಳು ಮಾಡುತ್ತಿವೆ.

ಎರಡು ದಿನದಿಂದ ಕಾಡಾನೆಗಳು ಜಮೀನಿಗೆ ನುಗ್ಗಿ ಭತ್ತದ ಸಸಿಗಳನ್ನು ತುಳಿದು ತಿಂದು ನಾಶ ಮಾಡುತ್ತಿದೆ. ಅರಣ್ಯ ಇಲಾಖೆ ಆನೆಗಳು ಜಮೀನು ಕಡೆಗೆ ಬಾರದಂತೆ ತಡೆಗಟ್ಟುವಲ್ಲಿ ವಿಫಲರಾಗಿದ್ದಾರೆ. ನಾಲ್ಕೈದು ವರ್ಷದ ಹಿಂದೆ ಆನೆ ಕಂದಕ ತೋಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ರೈಲ್ವೆ ಬ್ಯಾರಿಕೇಡ್ ಅಳವಡಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ ಎಂದು ಸತ್ತೇಗಾಲ ಗ್ರಾಮದ ರೈತ ಆನಂದ್ ದೂರಿದರು.

ಡ್ರೋನ್ ಮೂಲಕ ಕಾಡಾನೆಗಳ ಮೇಲೆ ನಿಗಾವಹಿಸಲಾಗಿದೆ. ಸದ್ಯ ಕಾವೇರಿ ನದಿ ದಾಟಿ ಆನೆಗಳು ಅರಣ್ಯ ಕಡೆಗೆ ತೆರಳಿವೆ. ಈಗಾಗಲೇ ಶಾಶ್ವತ ಪರಿಹಾರಕ್ಕಾಗಿ 5 ಕಿ.ಮೀ ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಡಿಪಿಆರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸದ್ಯಕ್ಕೆ ತಾತ್ಕಾ ಲಿಕವಾಗಿ ಸೋಲಾರ್ ತಂತಿ ಮೂಲಕ ಕಾಡಾನೆ ಬಾರದಂತೆ ಕ್ರಮವಹಿಸಲಾಗಿದೆ. ಬೆಳೆ ಹಾನಿಗೊಳಗಾಗಿರುವ ಜಮೀನುಗಳ ರೈತರಿಂದ ಪರಿಹಾರಕ್ಕೆ ಅರ್ಜಿ ಸ್ವೀಕರಿಸಲಾಗಿದೆ.

ರವಿಕುಮಾರ್, ವಲಯ ಅರಣ್ಯ ಅಧಿಕಾರಿ, ಕೊಳ್ಳೇಗಾಲ ಬಫರ್ ವಲಯ